ಕುಷ್ಠರೋಗದ ಬಗ್ಗೆ ಹಿಂದೆ ಬಹಳಷ್ಟು ತಪ್ಪು ಕಲ್ಪನೆಗಳಿದ್ದವು. ಸರಿಯಾದ ಚಿಕಿತ್ಸೆ ದೊರೆಯದ್ದಕ್ಕೆ ಕೆಲವರು ನರಕ ಯಾತನೆ ಅನುಭವಿಸಿರುವ ಬಗ್ಗೆ ಈಗಲೂ ಹಿರಿಯರು ಹೇಳುತ್ತಾರೆ. ಇತ್ತೀಚೆಗೆ ಕುಷ್ಠರೋಗ ಗುಣಪಡಿಸಲು ಔಷಧ ಕಂಡುಹಿಡಿಯಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕುಷ್ಠರೋಗಿಗಳಿಗೆ ಉಚಿತ ಔಷಧ ನೀಡಲಾಗುವುದು ಎಂದು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಮೇಲ್ವಿಚಾರಕ ಲೋಕೇಶ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ನಡೆದ ಕುಷ್ಠರೋಗ ನಿವಾರಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನವರಿ 1 ರಿಂದ 31 ರವರೆಗೂ ಕುಷ್ಠರೋಗ ಮಾಸಾಚರಣೆ ನಡೆಯಲಿದೆ. ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸುವರು. ಕುಷ್ಠರೋಗ ಶಾಪ ಅಲ್ಲ. ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಹರಡುತ್ತದೆ. ತಂಪಾದ ಜಾಗದಲ್ಲಿ ವಾಸಿಸುತ್ತದೆ. ಬಹುತೇಕ ನರಗಳ ಜೋಡಣೆ ಜಾಗದಲ್ಲಿ ಸೇರಿಕೊಂಡು ಸ್ಪರ್ಶ ಜ್ಞಾನವಿಲ್ಲದಂತೆ ಮಾಡುತ್ತದೆ. ಇದರಿಂದ ರೋಗಪೀಡಿತ ಅಂಗ ಮರಗಟ್ಟಿ ಹೋಗುತ್ತದೆ. ಆದ್ದರಿಂದ ಮುಚ್ಚುಮರೆ ಇಲ್ಲದೆ, ತಿಳಿ ತಾಮ್ರ ಬಣ್ಣದ ಮಚ್ಚೆಗಳು ಮೈ ಮೇಲೆ ಇದ್ದರೆ ತಕ್ಷಣ ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ನಂದಿನಿ, ಚೈತ್ರಾ, ವೀಣಾ, ಅಫ್ರೋಜ್, ಸಂದೀಪ್ ಹಾಜರಿದ್ದರು