Sidlaghatta : ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಜಂಗಮಕೋಟೆ-ಎಚ್.ಕ್ರಾಸ್ ರಸ್ತೆಯ ಬದಿಯ ಮರಗಳಿಗೆ ಸಂಖ್ಯೆ ಗುರುತು ಹಾಕಲಾಗಿದ್ದು, ಸುಮಾರು 35 ವರ್ಷಗಳಿಂದ ಬೆಳೆದು ನಿಂತಿರುವ ಈ ಮರಗಳಿಗೆ ಕೊಡಲಿ ಭೀತಿ ಎದುರಾಗಿದೆ. ಫಕೀರನಹೊಸಹಳ್ಳಿ ಇಟ್ಟಿಗೆ ಫ್ಯಾಕ್ಟರಿಯಿಂದ ಗಂಭೀರನಹಳ್ಳಿವರೆಗಿನ ಭಾಗದಲ್ಲಿ ಸುಮಾರು 300 ಮರಗಳಿಗೆ ಸಂಖ್ಯೆ ಹಾಕಲಾಗಿದ್ದು, ಮರಗಳ ತೆರವಿನ ಸಾಧ್ಯತೆ ಕುರಿತು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
In English: Roadside trees along the Jangamakote-H.Cross stretch have been numbered ahead of a four-lane highway widening project, raising fear of felling among local residents. Around 300 trees, many over 35 years old, have been marked between the Fakeeranahosahalli brick factory and Gambheeranahalli. Villagers are not opposed to the road development but are demanding that officials save as many trees as possible and plant replacement saplings for any that must be cleared.
ಎಲ್ಲಿ ಮರಗಳಿಗೆ ಸಂಖ್ಯೆ ಗುರುತು?
ತಾಲ್ಲೂಕಿನ ಜಂಗಮಕೋಟೆಯಿಂದ ಎಚ್.ಕ್ರಾಸ್ ವರೆಗಿನ ರಸ್ತೆಯ ಬದಿಯ ಮರಗಳಿಗೆ ಸಂಖ್ಯೆ ಗುರುತು ಹಾಕಲಾಗಿದೆ. ಅದರಲ್ಲೂ ಫಕೀರನಹೊಸಹಳ್ಳಿ ಇಟ್ಟಿಗೆ ಫ್ಯಾಕ್ಟರಿಯಿಂದ ಗಂಭೀರನಹಳ್ಳಿವರೆಗಿನ ಭಾಗದಲ್ಲಿ ಸುಮಾರು 300 ಮರಗಳಿದ್ದು, ಈ ಮರಗಳಲ್ಲಿ ಹಲವು ವರ್ಷಗಳಿಂದ ಬೆಳೆದು ನಿಂತಿರುವ ದೊಡ್ಡ ಮರಗಳೂ ಸೇರಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮರಗಳ ಕಾಂಡಗಳಿಗೆ ಬಿಳಿ ಬಣ್ಣ ಬಳಿದು ಸಂಖ್ಯೆಗಳನ್ನು ನಮೂದಿಸಿರುವುದು ಕಂಡುಬರುತ್ತಿದ್ದು, ಇದರಿಂದ ಮರಗಳನ್ನು ತೆರವುಗೊಳಿಸುವ ಸಾಧ್ಯತೆ ಕುರಿತು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಜಂಗಮಕೋಟೆ-ಎಚ್.ಕ್ರಾಸ್ ನಡುವಿನ ರಸ್ತೆಯ ಕೆಲವು ಭಾಗಗಳಲ್ಲಿ ಮರಗಳು ದಟ್ಟವಾಗಿ ಬೆಳೆದು ರಸ್ತೆಗೆ ಹಸಿರು ಸುರಂಗದಂತಹ ನೋಟ ನೀಡುತ್ತವೆ. ಬೇಸಿಗೆಯ ತೀವ್ರ ಬಿಸಿಲಿನ ನಡುವೆಯೂ ಈ ಮರಗಳ ನೆರಳಿನಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಕೊಂಚ ನೆಮ್ಮದಿ ಕಾಣುತ್ತಾರೆ. ಸ್ಥಳೀಯರ ಪಾಲಿಗೆ ಅವು ಕೇವಲ ರಸ್ತೆ ಬದಿಯ ಸಸ್ಯಗಳಲ್ಲ, ಈ ಭಾಗದ ನೈಸರ್ಗಿಕ ಪರಿಸರದ ಅವಿಭಾಜ್ಯ ಅಂಗವಾಗಿವೆ.
ಗ್ರಾಮಸ್ಥರ ಆಗ್ರಹವೇನು?
“ಅಭಿವೃದ್ಧಿ ವಿರೋಧವಲ್ಲ, ಮರ ಕಡಿಯುವುದಕ್ಕೆ ವಿರೋಧ” ಎಂದು ಮಲ್ಲೇನಹಳ್ಳಿ ಗ್ರಾಮದ ರಮೇಶ್, ರಾಜಣ್ಣ, ಸುರೇಶ್ ಹಾಗೂ ಕೃಷ್ಣ ಅವರು ಪ್ರತಿಕ್ರಿಯಿಸಿದ್ದಾರೆ. “ರಸ್ತೆ ಅಭಿವೃದ್ಧಿಯಾಗಲಿ, ವಾಹನ ಸಂಚಾರ ಸುಗಮವಾಗಲಿ ಎಂಬುದು ನಮ್ಮ ಆಶಯವೂ ಹೌದು. ಆದರೆ 35 ವರ್ಷಗಳಿಂದ ಬೆಳೆದು ನಿಂತಿರುವ ಮರಗಳನ್ನು ಒಂದೇ ಬಾರಿಗೆ ಕಡಿದುಹಾಕುವುದು ಸರಿಯಲ್ಲ. ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಂಡು ರಸ್ತೆ ನಿರ್ಮಿಸುವ ಮಾರ್ಗವನ್ನು ಅಧಿಕಾರಿಗಳು ಹುಡುಕಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ರಸ್ತೆ ಅಗಲೀಕರಣಕ್ಕಾಗಿ ಅನಿವಾರ್ಯವಾಗಿ ಕೆಲವು ಮರಗಳನ್ನು ತೆರವುಗೊಳಿಸಬೇಕಾದರೆ, ಯಾವ ಮರಗಳನ್ನು ಏಕೆ ತೆರವುಗೊಳಿಸಲಾಗುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಉಳಿಸಬಹುದಾದ ಮರಗಳನ್ನು ಗುರುತಿಸಿ ರಕ್ಷಿಸಬೇಕು” ಎಂಬುದು ಗ್ರಾಮಸ್ಥರ ಆಗ್ರಹ. ಈ ಬಗ್ಗೆ ಪ್ರತಿಕ್ರಿಯಿಸಿದ ಹೊಸಪೇಟೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್.ಸುರೇಶ್, “ಹೆದ್ದಾರಿ ಅಭಿವೃದ್ಧಿ ಯೋಜನೆ ಸ್ವಾಗತಾರ್ಹ. ಆದರೆ ಮರಗಳ ತೆರವಿಗೂ ಮುನ್ನ ಸಂಬಂಧಪಟ್ಟ ಇಲಾಖೆ ಗ್ರಾಮಸ್ಥರೊಂದಿಗೆ ಚರ್ಚಿಸಿ, ಸಾಧ್ಯವಿರುವಷ್ಟು ಮರಗಳನ್ನು ಉಳಿಸುವ ಪ್ರಯತ್ನ ಮಾಡಬೇಕು. ತೆರವಾಗುವ ಪ್ರತಿ ಮರಕ್ಕೂ ಪರ್ಯಾಯವಾಗಿ ಹೊಸ ಸಸಿ ನೆಡಿಸುವ ಯೋಜನೆಯನ್ನು ಅಧಿಕಾರಿಗಳು ಜಾರಿಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.

ಯಾವ ಯೋಜನೆಗಾಗಿ ಹೆದ್ದಾರಿ ವಿಸ್ತರಣೆ?
ದೇವನಹಳ್ಳಿ-ಕೋಲಾರ ರಾಜ್ಯ ಹೆದ್ದಾರಿಯನ್ನು (SH-96) ನಾಲ್ಕು ಪಥಗಳ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವ ಯೋಜನೆಯಡಿ ಎಚ್. ಕ್ರಾಸ್ ನಲ್ಲಿ ರಸ್ತೆ ವಿಸ್ತರಣೆ ಹಾಗೂ ಫ್ಲೈಓವರ್ ನಿರ್ಮಾಣ ಸೇರಿದಂತೆ ಸರ್ವಿಸ್ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಜಂಗಮಕೋಟೆ ಕ್ರಾಸ್ನಲ್ಲಿ ಅಂಡರ್ ಪಾಸ್ ಮತ್ತು ರೌಂಡ್ ಅಬೌಟ್, ಎಚ್.ಕ್ರಾಸ್ನಲ್ಲಿ ಫ್ಲೈಓವರ್ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಈ ಅಭಿವೃದ್ಧಿಯಿಂದ ದೇವನಹಳ್ಳಿ, ಹೊಸಕೋಟೆ, ಶಿಡ್ಲಘಟ್ಟ, ಚಿಂತಾಮಣಿ, ವೇಮಗಲ್ ಹಾಗೂ ಕೋಲಾರ ಭಾಗಗಳ ಸಂಪರ್ಕ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.
ಸಾಧ್ಯವಿರುವ ಕಡೆ ರಸ್ತೆ ವಿನ್ಯಾಸದಲ್ಲಿ ಬದಲಾವಣೆ ಮಾಡಿ ಮರಗಳನ್ನು ಉಳಿಸುವುದು, ಅನಿವಾರ್ಯವಾಗಿ ತೆರವುಗೊಳಿಸಬೇಕಾದ ಮರಗಳ ಬದಲಿಗೆ ಸಮರ್ಪಕ ಸಂಖ್ಯೆಯಲ್ಲಿ ಸ್ಥಳೀಯ ಜಾತಿಯ ಮರಗಳನ್ನು ನೆಡುವುದು ಮತ್ತು ನೆಟ್ಟ ಮರಗಳ ನಿರ್ವಹಣೆಯ ಜವಾಬ್ದಾರಿಯನ್ನು ನಿಗದಿಪಡಿಸುವುದು ಸೇರಿದಂತೆ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. “35 ವರ್ಷಗಳಲ್ಲಿ ಬೆಳೆದ ಮರವನ್ನು 35 ದಿನಗಳಲ್ಲಿ ಬೆಳೆಸಲು ಸಾಧ್ಯವಿಲ್ಲ. ಹೆದ್ದಾರಿ ನಾಲ್ಕು ಪಥವಾಗಲಿ; ಆದರೆ ಅದರ ಜತೆಗೆ ಈ ರಸ್ತೆಯ ಹಸಿರೂ ಉಳಿಯಲಿ” ಎಂಬುದು ಸ್ಥಳೀಯರ ಆಶಯ.

FAQ
ಎಷ್ಟು ಮರಗಳಿಗೆ ಸಂಖ್ಯೆ ಗುರುತು ಹಾಕಲಾಗಿದೆ?
ಜಂಗಮಕೋಟೆ-ಎಚ್.ಕ್ರಾಸ್ ರಸ್ತೆಯ ಫಕೀರನಹೊಸಹಳ್ಳಿ-ಗಂಭೀರನಹಳ್ಳಿ ನಡುವಿನ ಭಾಗದಲ್ಲಿ ಸುಮಾರು 300 ಮರಗಳಿಗೆ ಸಂಖ್ಯೆ ಗುರುತು ಹಾಕಲಾಗಿದೆ.
ಈ ಮರಗಳನ್ನು ಏಕೆ ಗುರುತಿಸಲಾಗಿದೆ?
ದೇವನಹಳ್ಳಿ-ಕೋಲಾರ ರಾಜ್ಯ ಹೆದ್ದಾರಿಯನ್ನು (SH-96) ನಾಲ್ಕು ಪಥಗಳಿಗೆ ವಿಸ್ತರಿಸುವ ಯೋಜನೆಗಾಗಿ ಮರಗಳ ತೆರವಿನ ಸಾಧ್ಯತೆ ಇರುವುದರಿಂದ ಸಂಖ್ಯೆ ಗುರುತು ಹಾಕಲಾಗಿದೆ.

