Sidlaghatta : ಶಿಡ್ಲಘಟ್ಟ ನಗರದ ವಿವಿಧ ವಾರ್ಡ್ ಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ವೀರಪುರ ಗ್ರಾಮದ ಕಲ್ಯಾಣಿಯಲ್ಲಿ ನಗರಸಭೆ ವತಿಯಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
In English: With Sidlaghatta declared drought-hit this year, the municipal council has prepared the Veerapura village kalyani — cleaned over the past 3-4 days and filled with water for over 50 registered committees’ Ganesh idols — while police and fire brigade stand by and organisers are told to finish immersions by 6 pm.
ಕಳೆದ 3–4 ದಿನಗಳಿಂದ ಪೌರಕಾರ್ಮಿಕರ ಮೂಲಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗಿದ್ದು, ಗ್ರಾಮ ಪಂಚಾಯಿತಿ ಅನುಮತಿಯೊಂದಿಗೆ ವಿಸರ್ಜನೆಗೆ ಅಗತ್ಯವಾದ ನೀರನ್ನು ತುಂಬಿಸಿ ಸಿದ್ಧತೆ ಮಾಡಲಾಗಿದೆ ಎಂದು ನಗರಸಭೆಯ ಪರಿಸರ ಎಂಜಿನಿಯರ್ (ಎಇಇ) ಮೋಹನ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 50ಕ್ಕೂ ಹೆಚ್ಚು ಸಮಿತಿಗಳಿಗೆ ತಾಲ್ಲೂಕು ಆಡಳಿತದಿಂದ ಗರಿಷ್ಠ ಏಳು ದಿನಗಳ ಅವಧಿಗೆ ಅನುಮತಿ ನೀಡಲಾಗಿದೆ. ಅನುಮತಿ ಪಡೆದ ಸಮಿತಿಗಳು ನಿಗದಿತ ಅವಧಿ ಹಾಗೂ ನಿಯಮಗಳನ್ನು ಪಾಲಿಸಿ ಮೂರ್ತಿ ವಿಸರ್ಜನೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಗಣೇಶ ಮೂರ್ತಿಗಳನ್ನು ವೀರಪುರದ ಕಲ್ಯಾಣಿಗೆ ತಂದು ನೀಡಿದಲ್ಲಿ, ನಗರಸಭೆ ಸಿಬ್ಬಂದಿಯೇ ಅವುಗಳನ್ನು ಸುರಕ್ಷಿತವಾಗಿ ನೀರಿನಲ್ಲಿ ವಿಸರ್ಜಿಸುವ ವ್ಯವಸ್ಥೆ ಮಾಡಲಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ಆಯೋಜಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳದ ನೆರವನ್ನೂ ಪಡೆಯಲಾಗಿದೆ.
ಮೆರವಣಿಗೆಗಳನ್ನು ಮಧ್ಯಾಹ್ನವೇ ಆರಂಭಿಸಿ, ಯಾವುದೇ ಕಾರಣಕ್ಕೂ ತಡರಾತ್ರಿಯವರೆಗೆ ಮುಂದುವರಿಸದೆ ಸಂಜೆ 6 ಗಂಟೆಯೊಳಗೆ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಗಣೇಶೋತ್ಸವ ಸಮಿತಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಹಾಗೂ ಆಯೋಜಕರು ಪೊಲೀಸ್ ಇಲಾಖೆ, ನಗರಸಭೆ ಮತ್ತು ತಾಲ್ಲೂಕು ಆಡಳಿತದ ಸೂಚನೆಗಳನ್ನು ಪಾಲಿಸಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಮೋಹನ್ ಕುಮಾರ್ ಮನವಿ ಮಾಡಿದ್ದಾರೆ.
ಪರಿಸರ ಸ್ನೇಹಿ ವಿಸರ್ಜನೆಗೆ ಆದ್ಯತೆ:
ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಕಲ್ಯಾಣಿಯ ನೀರು ಕಲುಷಿತವಾಗದಂತೆ ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಮೂರ್ತಿಗಳೊಂದಿಗೆ ಹೂವು, ಬಟ್ಟೆ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ನೀರಿಗೆ ಹಾಕದೆ ಪ್ರತ್ಯೇಕವಾಗಿ ವಿಲೇವಾರಿ ಮಾಡುವಂತೆ ನಗರಸಭೆ ಸಾರ್ವಜನಿಕರಿಗೆ ಸೂಚಿಸಿದೆ.

