Sidlaghatta : ಮದುವೆಯಾಗಿ ಗಂಡನ ಮನೆ ಸೇರಿದ್ದ ಹೆಣ್ಣುಮಕ್ಕಳು ವರ್ಷಗಳ ಬಳಿಕ ತವರೂರಿಗೆ ಮರಳಿ, ಬಾಲ್ಯದ ಗೆಳತಿಯರು, ನೆರೆಹೊರೆಯವರು ಹಾಗೂ ಹಿರಿಯರನ್ನು ಭೇಟಿಯಾಗಿ ಸಂಭ್ರಮಿಸಿದ ಅಪರೂಪದ ಕ್ಷಣಗಳಿಗೆ ಕಂಬದಹಳ್ಳಿ ಗ್ರಾಮ ಸಾಕ್ಷಿಯಾಯಿತು.
In English: Kambadahalli village hosted a “Tavarina Siri” (Pride of the Maternal Home) event as part of its Ganeshotsava celebrations, organised by a team of local youth who invited women born in the village but now married and settled elsewhere to return and reconnect with childhood friends, neighbours and elders. Bagina (ceremonial gifts) were offered to the women, who then joined the festival feast together.
ಗಣೇಶೋತ್ಸವದ ಅಂಗವಾಗಿ ಗ್ರಾಮದ ಯುವಕರ ತಂಡ ಆಯೋಜಿಸಿದ್ದ “ತವರಿನ ಸಿರಿ” ಕಾರ್ಯಕ್ರಮದಲ್ಲಿ ಕಂಬದಹಳ್ಳಿಯಲ್ಲಿ ಹುಟ್ಟಿ, ಮದುವೆಯ ಬಳಿಕ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಹೆಣ್ಣುಮಕ್ಕಳನ್ನು ಆಹ್ವಾನಿಸಲಾಗಿತ್ತು. ಗ್ರಾಮದ ವಿವಿಧ ಕುಟುಂಬಗಳ ಹೆಣ್ಣುಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಸ್ಪರ ಭೇಟಿ ಮಾಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
“ಏಯ್, ನೀನು ಅವರ ಮಗಳಲ್ಲವೇ? ಆಗ ಹೇಗಿದ್ದೆಯೋ ಈಗಲೂ ಹಾಗೆಯೇ ಇದ್ದೀಯಲ್ಲ. ನಿನ್ನ ಗಂಡ, ಮಕ್ಕಳು ಬಂದಿದ್ದಾರಾ? ತೋರಿಸು. ನಿನ್ನ ಮದುವೆಯಲ್ಲಿ ನಿನ್ನನ್ನು ನೋಡಿದ್ದೇ ಕೊನೆ. ಈಗ ಅಜ್ಜಿಯಾಗಿಬಿಟ್ಟಿದ್ದೀಯಲ್ಲ. ಮೊಮ್ಮಕ್ಕಳು ಎಲ್ಲಿ?” ಎಂಬಂತಹ ಆತ್ಮೀಯ ಮಾತುಕತೆಗಳು ಹಲವು ವರ್ಷಗಳ ಬಳಿಕ ಭೇಟಿಯಾದ ಗೆಳತಿಯರ ನಡುವೆ ಕೇಳಿಬಂದವು. “ಅಮ್ಮಾ, ಚೆನ್ನಾಗಿದ್ದೀಯಾ? ಮಗಳು ಕಮಲಾಗೆ ಮದುವೆಯಾಯಿತಂತೆ ಗೊತ್ತಾಯಿತು. ಬರಲು ಆಗಲಿಲ್ಲ. ನಿಮ್ಮ ಮೊಮ್ಮಗ ಮೊನ್ನೆ ಸಿಕ್ಕಿದ್ದ. ಅವರಿಂದ ನಿಮ್ಮೆಲ್ಲರ ವಿಚಾರ ಕೇಳಿದೆ. ತಾತ ತೀರಿಕೊಂಡರಂತೆ, ವಿಷಯ ತಿಳಿದು ಬೇಸರವಾಯಿತು” ಎಂಬ ವಿಚಾರಣೆಗಳೂ ನಡೆದವು.
ಹಲವು ವರ್ಷಗಳ ಬಳಿಕ ಭೇಟಿಯಾದವರು ಪರಸ್ಪರ ಬಿಗಿದಪ್ಪಿಕೊಂಡು ಸಂತಸಪಟ್ಟರು. ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಕೆಲವರು ಭಾವೋದ್ವೇಗದಿಂದ ಕಣ್ಣೀರಾದರು. ತವರು ಮನೆ ಮಾತ್ರವಲ್ಲ, ತವರೂರಿನ ಎಲ್ಲರೂ ಚೆನ್ನಾಗಿರಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳಿಗೆ ಬಾಗಿನ ಅರ್ಪಿಸಲಾಯಿತು. ಗಣೇಶೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡ ಅವರು, ಕಡುಬು, ಪಾಯಸ ಸೇರಿದಂತೆ ಸಾಂಪ್ರದಾಯಿಕ ಊಟ ಸವಿದು ಸಂಭ್ರಮಿಸಿದರು. ತಾಲ್ಲೂಕಿನಾದ್ಯಂತ ಗಣೇಶೋತ್ಸವ ಅಂಗವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು.

“ಮಿನಿ ಜಪಾನ್” ಎಂದೇ ಗುರುತಿಸಿಕೊಂಡಿರುವ ಕಂಬದಹಳ್ಳಿ, ಹಲವು ಸಚಿವರು, ಶಾಸಕರು ಹಾಗೂ ರಾಜಕೀಯ ಮುಖಂಡರ ಕುಟುಂಬಗಳೊಂದಿಗೆ ನಂಟು ಹೊಂದಿರುವ ಗ್ರಾಮವಾಗಿದೆ. ಗ್ರಾಮದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕೆಲ ಯುವಕರು ಸೇರಿ, ಮದುವೆಯಾಗಿ ಗಂಡನ ಮನೆ ಸೇರಿರುವ ಗ್ರಾಮದ ಹೆಣ್ಣುಮಕ್ಕಳನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಕೆ.ಟಿ. ನಂಜುಂಡಗೌಡ, ರಾಜಗೋಪಾಲ್ ರೆಡ್ಡಿ, ಕೆ.ಬಿ. ಶ್ರೀನಿವಾಸ್, ನೂತನ್, ಜಯರಾಮರೆಡ್ಡಿ, ಸುರೇಂದ್ರಗೌಡ, ಕೆ.ವಿ. ಪ್ರಕಾಶ್, ಲಕ್ಷ್ಮೀಪತಿರೆಡ್ಡಿ, ಮುನಿರೆಡ್ಡಿ ಸೇರಿದಂತೆ ಗ್ರಾಮದ ಮುಖಂಡರು, ಯುವಕರ ತಂಡದ ಸದಸ್ಯರು ಹಾಗೂ ಗ್ರಾಮದ ಹೆಣ್ಣುಮಕ್ಕಳು ಭಾಗವಹಿಸಿದ್ದರು.

