Sidlaghatta : ಕಲೆ, ವಾಸ್ತುಶಿಲ್ಪ ಹಾಗೂ ಕರಕುಶಲ ಕ್ಷೇತ್ರಗಳಿಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಾಚಾರಿ ಹೇಳಿದರು.
In English: Vishwakarma Kshemabhivriddhi Sangha taluk president Amaranarayanachari said the Vishwakarma community’s contribution to art, architecture and craft is immense, speaking at a Vishwakarma Jayanti celebration organised by the National Festivals Celebration Committee at the Sidlaghatta Taluk Office. Community students who excelled in their SSLC, PUC and degree exams were felicitated at the event.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮರನ್ನು ಹಿಂದೂ ಧರ್ಮದಲ್ಲಿ ದೈವಿಕ ವಾಸ್ತುಶಿಲ್ಪಿ ಹಾಗೂ ಸೃಷ್ಟಿಕರ್ತನಾಗಿ ಪೂಜಿಸಲಾಗುತ್ತದೆ. ಮನುಕುಲದ ವಿವಿಧ ಕ್ಷೇತ್ರಗಳಿಗೆ ಅವರ ಕೊಡುಗೆ ಇರುವುದರಿಂದ ಎಲ್ಲ ಸಮುದಾಯಗಳಿಗೂ ಅವರು ಗೌರವಾನ್ವಿತರು ಎಂದರು.
ಋಗ್ವೇದ ಸೇರಿದಂತೆ ವಿವಿಧ ಪುರಾಣಗಳಲ್ಲಿ ವಿಶ್ವಕರ್ಮರನ್ನು ಶ್ರೇಷ್ಠ ಶಿಲ್ಪಿ ಹಾಗೂ ನಗರ, ನದಿ, ಆಯುಧ ಸೇರಿದಂತೆ ವಿವಿಧ ವಾಸ್ತುಗಳ ನಿರ್ಮಾತೃ ಎಂದು ಬಣ್ಣಿಸಲಾಗಿದೆ. ಲಂಕಾ, ದ್ವಾರಕಾ ಹಾಗೂ ಇಂದ್ರಪ್ರಸ್ಥದಂತಹ ಮಹಾನಗರಗಳ ನಿರ್ಮಾಣದಲ್ಲೂ ವಿಶ್ವಕರ್ಮರ ಪಾತ್ರವಿದೆ ಎಂಬ ನಂಬಿಕೆ ಇದೆ. ಮನೆ, ದೇವಾಲಯ ಹಾಗೂ ವಿವಿಧ ಕಟ್ಟಡಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕೌಶಲ ಇಂದಿಗೂ ಕಾಣಬಹುದು ಎಂದು ಹೇಳಿದರು.
ಗ್ರೇಡ್–2 ತಹಶೀಲ್ದಾರ್ ಕೆ.ಎನ್.ಎಂ. ಮಂಜುನಾಥ್ ಮಾತನಾಡಿ, ಕರಕುಶಲ ಸಾಮಗ್ರಿಗಳು, ಲೋಹ–ಕಬ್ಬಿಣದ ವಸ್ತುಗಳು, ದೇವರ ವಿಗ್ರಹಗಳು, ಚಿತ್ರಪಟಗಳು, ಗೃಹಬಳಕೆ ವಸ್ತುಗಳು ಹಾಗೂ ಸ್ಮಾರಕಗಳ ನಿರ್ಮಾಣದಲ್ಲಿ ವಿಶ್ವಕರ್ಮರ ಕಲಾ ಕೌಶಲದ ಮಹತ್ವ ಇಂದಿಗೂ ಉಳಿದಿದೆ ಎಂದರು. ವಿಶ್ವಕರ್ಮ ಸಮಾಜವು ಭವ್ಯ ಪರಂಪರೆ ಹೊಂದಿದ್ದು, ವಿಶ್ವಕರ್ಮ ಜಯಂತಿಯನ್ನು ಪ್ರತಿಭೆ, ಕಲೆ ಹಾಗೂ ವೈಜ್ಞಾನಿಕ ಪ್ರಗತಿಗೆ ಪ್ರೇರಣೆ ನೀಡುವ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಈ ಹಿಂದೆ ಸೆ.17ಕ್ಕೆ ವಿಶ್ವಕರ್ಮ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ನೋಂದಣಿಗೆ ಆಹ್ವಾನಿಸಲಾಗಿತ್ತು. ಅದೇ ದಿನ ನಗರದ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರೂ ವಿಶ್ವಕರ್ಮ ಜಯಂತಿ ಆಚರಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸ್ವಾಮಿ, ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ, ಸಮುದಾಯದ ಮುಖಂಡರಾದ ಸುಂದರಾಚಾರಿ, ಶ್ರೀನಾಥ್, ಬಿ.ವಿ. ಮಂಜುನಾಥ್, ಚಂದ್ರಶೇಖರ್, ಜಗದೀಶ್ ಹಾಗೂ ರೇಷ್ಮೆ ಇಲಾಖೆಯ ಉಪನಿರ್ದೇಶಕ ಅಕ್ಮಲ್ ಪಾಷ ಇದ್ದರು.

