Home News ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 138 ನೇ ಜನ್ಮದಿನಾಚರಣೆ

ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 138 ನೇ ಜನ್ಮದಿನಾಚರಣೆ

0
Krishna Raja Wadiyar Birth Anniversary

Sidlaghatta : ಶಿಡ್ಲಘಟ್ಟ ನಗರದ ಕ್ರೆಸೆಂಟ್ ಪ್ರೌಢಶಾಲೆಯಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ (Krishna Raja Wadiyar IV) ರವರ 138 ನೇ ಜನ್ಮದಿನಾಚರಣೆ (Birth Anniversary) ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ್ ಹಡಪದ್ (Chandrashekar Hadpad) ಮಾತನಾಡಿದರು.

ಅಂದಿನ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ತಮ್ಮ 38 ವರ್ಷಗಳ ಅವರ ಭವ್ಯ ಆಡಳಿತವನ್ನು ನೆನಪಿಸುವ ಸಾಕ್ಷಿಗಳು ಇಂದಿಗೂ ನಮ್ಮ ಮುಂದಿವೆ. ದೇವದಾಸಿ ಪದ್ದತಿಯನ್ನು ನಿರ್ಮೂಲನೆಗೊಳಿಸಿದ್ದು, ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದು, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದು, ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದ್ದು, 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭ, ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪನೆ, ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿ, ವಯಸ್ಕರಿಗಾಗಿ 7000 ವಯಸ್ಕರ ಶಾಲೆ… ಹೀಗೆ ಒಂದರ ಹಿಂದೆ ಒಂದರಂತೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸೇವೆ ಅಪರಿಮಿತ ಎಂದು ಅವರು ತಿಳಿಸಿದರು.

ಜನಪರ ಆಡಳಿತ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು. ಹೊಸ ರೈಲು ದಾರಿಗಳ ನಿರ್ಮಾಣಗಳಾದವು.

ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್ ಯೋಜನೆ ಪ್ರಾರಂಭ, ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯಿತಿಗಳ ಕಾಯ್ದೆಯನ್ನು ನಾಲ್ವಡಿಯವರ ಕಾಲದಲ್ಲಿ ಜಾರಿಗೆ ತರಲಾಯ್ತು. ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪನಿ, ಮೈಸೂರು ಪೇಪರ್ ಮಿಲ್, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಇವರ ಕಾಲದಲ್ಲಿಯೇ ಪ್ರಾರಂಭಗೊಂಡವು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ರೂಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರನ್ನು ವಿದ್ವಾಂಸರು, ಶಿಕ್ಷಣ ತಜ್ಞರು, ಇತಿಹಾಸಕಾರರು, ”ಸಾಮಾಜಿಕ ಕಾನೂನಗಳ ಹರಿಕಾರ”ಎಂದು ಕರೆದಿದ್ದಾರೆ ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಶೈಕ್ಷಣಿಕ ಕೊಡುಗೆ ಮತ್ತು ಸುಧಾರಣೆಗಳು ನಾವುಗಳು ಸದಾ ಸ್ಮರಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾಗಿ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳ ಅಭಿವೃದ್ಧಿಗೆ ಇವರು ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ, ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ, ಮೈಸೂರು ಬ್ಯಾಂಕ್, ಅಡಮಾನ ಬ್ಯಾಂಕುಗಳ ಸ್ಥಾಪನೆ, ಸ್ತ್ರೀ ಶಿಕ್ಷಣ ಕಡ್ಡಾಯ, ಕುರುಡ ಮತ್ತು ಮೂಕ ಮಕ್ಕಳಿಗೆ ಶಾಲೆ ಪ್ರಾರಂಭ, 1911 ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭ, ಶಾಲಾ ಪ್ರವೇಶಕ್ಕೆ ಜಾತಿ ಪದ್ದತಿ ನಿರ್ಮೂಲನೆ ಮತ್ತು ಇವರ ಅವದಿಯಲ್ಲಿ 800 ಶಾಲೆಗಳ ಸ್ಥಾಪನೆ ಸಹ ಮಾಡಲಾಗಿದೆ ಎಂದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಕ್ರೆಸೆಂಟ್ ಸ್ಕೂಲ್ ನ ಕಾರ್ಯದರ್ಶಿ ತಮೀಮ್ ಅನ್ಸಾರಿ, ಮುನಿಯಪ್ಪ, ಶಿಕ್ಷಕರಾದ ಮೂರ್ತಿ, ರಾಮಚಂದ್ರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version