Home News  ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮ

 ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮ

0
Sidlaghatta Kuvempu Birth Anniversary

Sidlaghatta : ಕುವೆಂಪು ಅವರು ರಚಿಸಿರುವ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ, ಅವರು ರಚಿಸಿದ ನಾಟಕಗಳು, ಭಾಷಣ ಮತ್ತು ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ಕಥೆ ಕಾದಂಬರಿಗಳು ಮತ್ತು ಆತ್ಮ ಕಥನ ನೆನಪಿನ ದೋಣಿಯಲ್ಲಿ ಮುಂತಾದವುಗಳನ್ನು ವಿದ್ಯಾರ್ಥಿಗಳು ಮತ್ತು ಎಲ್ಲಾ ಸಾಹಿತ್ಯಾಸಕ್ತರು ಓದಬೇಕು. ಪ್ರತಿಯೊಬ್ಬರು ವಿಶ್ವಮಾನವರಾಗಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸ ನಾಯ್ಡು ತಿಳಿಸಿದರು.

ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಚರಿಸಿದ ಕುವೆಂಪು 118 ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು ಯಾವುದೇ ಜಾತಿಗೆ ಸೇರಿದವರಲ್ಲದವರು. ವೈಚಾರಿಕ ಪ್ರಜ್ಞೆಯೊಂದಿಗೆ ಪೂರ್ಣ ಅರಳಿದ ಬದುಕು ಅವರದಾಗಿತ್ತು. ಅನುಭವದ ಆಳಕ್ಕೆ ಇಳಿದು ಕವಿಯಾಗಿ ಜಗತ್ತಿಗೆ ವಿಚಾರಧಾರೆಗಳನ್ನು ಹಂಚುವ ಮೂಲಕ ವಿಶ್ವಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಮನುಕುಲದಲ್ಲಿ ಅಜರಾಮರಾಗಿ ಉಳಿದದರು. ವಿಶ್ವಮಾನವನಾಗಿ ಎಲ್ಲರ ಮನೆ ಮನದಲ್ಲಿ ಉಳಿದುಕೊಂಡಿರುವ ಇಂತಹ ಮಹಾನ್ ಸಂತನನ್ನು ನೆನೆಯುವುದೇ ನಮ್ಮೆಲ್ಲರ ಭಾಗ್ಯ ಎಂದು ಸ್ಮರಿಸಿದರು.

ನಗರಸಭೆ ಪೌರಾಯುಕ್ತ ಶ್ರೀಕಾಂತ್, ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹದ ಬಗ್ಗೆ ಮಾತನಾಡಿ, ಅನಿಕೇತನ, ಮಲೆನಾಡಿನ ಚಿತ್ರಗಳು, ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ನನ್ನ ದೇವರು ಮತ್ತು ಇತರ ಕತೆಗಳು, ಕತೆ, ಕಾದಂಬರಿಗಳನ್ನು ಹೆಸರಿಸಿ ಅದರ ಪರಿಚಯ ಮಾಡಿದರು.

ಪ್ರತಿಯೊಬ್ಬರು ವಿಶ್ವಮಾನವನಾಗಬೇಕು, ವಿದ್ಯಾರ್ಥಿಗಳು ಪುಸ್ತಕ ಪ್ರೀತಿಯನ್ನು ಬೆಳಸಿಕೊಳ್ಳಬೇಕು, ಅಧ್ಯಯನಶೀಲರಾಗಬೇಕು. ಪುಸ್ತಕದ ಮೂಲಕ ಮನುಷ್ಯ ಮರುಹುಟ್ಟನ್ನು ಪಡೆಯಬೇಕು ಎಂದರು.

ರಾಷ್ಟಕವಿ ಕುವೆಂಪು ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲಾ ವಿದ್ಯಾರ್ಥಿಗಳು ರಾಷ್ಟ್ರಕವಿ ಕುವೆಂಪು ರಚಿಸಿದ ಗೀತೆಗಳನ್ನು ಹಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಶಿಕ್ಷಕ ನಾರಾಯಣಸ್ವಾಮಿ ಮಾತಾಡಿದರು.

ಸಿಡಿಪಿಒ ನವತಾಜ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ, ಶಿಕ್ಷಕ ಕೆಂಪಣ್ಣ, ರೈತ ಸಂಘದ ಮುನಿನಂಜಪ್ಪ, ಮುನಿಕೆಂಪಣ್ಣ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version