Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ BESCOM ಇಲಾಖೆಯ ಉಪ ಕೇಂದ್ರದಲ್ಲಿ ಬುಧವಾರ ಸಹಾಯಕ ಎಂಜಿನಿಯರ್ ರೈತನೊಬ್ಬನ ಬಳಿ ಲಂಚ ಸ್ವೀಕರಿಸುವಾಗ ಚಿಕ್ಕಬಳ್ಳಾಪುರ ACB ಡಿವೈಎಸ್ಪಿ ಸುಧೀರ್ ತಂಡ ದಾಳಿ (Raid) ನಡೆಸಿದೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿ ಅಂಕತಟ್ಟಿ ಗ್ರಾಮದ ರೈತನೊಬ್ಬನ ಬಳಿ ಎಇ ಶ್ರೀನಿವಾಸ್ ಎಂಬವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಅಂಕತಟ್ಟಿ ಗ್ರಾಮದ ರೈತನೊಬ್ಬನಿಗೆ ಸೇರಿದ ಜಮೀನಿನಲ್ಲಿ ಟ್ರಾನ್ಸ್ ಫಾರಂ ಕೆಟ್ಟಿರುವ ಹಿನ್ನೆಲೆಯಲ್ಲಿ ಅದನ್ನು ಬದಲಾಯಿಸಲು ಅರ್ಜಿ ಸಲ್ಲಿಸಿದ್ದ ರೈತನಿಗೆ, ಎಇ ಶ್ರೀನಿವಾಸ್ ರವರು ರೈತ ತನ್ನ ಜಮೀನಿನಲ್ಲಿ ಕೃಷಿ ಹೊಂಡಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರೂ ಎಂಬ ಮಾಹಿತಿ ಮೇರೆಗೆ ಸುಮಾರು 89,000 ರೂಗಳ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.
ನಂತರದ ದಿನಗಳಲ್ಲಿ 89 ಸಾವಿರ ಮನ್ನಾ ಮಾಡುತ್ತೇವೆ, ಮೂವತ್ತು ಸಾವಿರ ಕೊಡಿ ಎಂದು ರೈತನ ಬಳಿ ಎಇ ಶ್ರೀನಿವಾಸ್ ಎಂಬುವರು ಬೇಡಿಕೆ ಇಟ್ಟಿದ್ದರಂತೆ. ನಂತರ ಮುಂಗಡವಾಗಿ ರೈತನಿಂದ 5000 ಪಡೆದುಕೊಂಡು, ಬುಧವಾರ 20,000 ಸ್ವೀಕರಿಸುವಾಗ ಎಸಿಬಿ ಬೆಲೆಗೆ ಬಿದ್ದಿದ್ದಾರೆ.