Sidlaghatta : ಶಿಡ್ಲಘಟ್ಟ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ (ಪಿ.ಎಲ್.ಡಿ ಬ್ಯಾಂಕ್) 88ನೇ ಸಹಕಾರಿ ವರ್ಷದ ಸರ್ವ ಸದಸ್ಯರ ಮಹಾಸಭೆ ಸೆ. 19ರಂದು ಬೆಳಿಗ್ಗೆ 11 ಗಂಟೆಗೆ ಬ್ಯಾಂಕ್ ಆವರಣದಲ್ಲಿ ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಜಿ. ಸುರೇಶ್ ತಿಳಿಸಿದರು.
In English: The Sidlaghatta Taluk Primary Land Development (PLD) Bank’s 88th annual general meeting will be held on September 19 at 11 am at the bank premises, president M.G. Suresh announced. He said about ₹15 crore in agricultural loans remains overdue, limiting the bank’s capacity for fresh lending, and urged farmers to repay on time.

ಬ್ಯಾಂಕ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಿ.ಎನ್. ರವಿಕುಮಾರ್ ಅವರು ಮಹಾಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದರು. ಸಹಕಾರಿ ಕಾಯ್ದೆ–1959ರ ಅನ್ವಯ ಐದು ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ ಎರಡು ಮಹಾಸಭೆಗಳಿಗೆ ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕು. ಅಲ್ಲದೆ, ಎರಡು ವರ್ಷ ಬ್ಯಾಂಕ್ ನೊಂದಿಗೆ ವ್ಯವಹಾರ ನಡೆಸಿರಬೇಕು. ಆದ್ದರಿಂದ ಅರ್ಹ ಎಲ್ಲ ಸದಸ್ಯರು ಮಹಾಸಭೆಗೆ ತಪ್ಪದೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ಮಹಾಸಭೆಯಲ್ಲಿ 2025–26ನೇ ಸಾಲಿನ ಆಡಳಿತ ಮಂಡಳಿಯ ವರದಿ ಓದಿ ಅಂಗೀಕರಿಸುವುದು, ಜಮಾ–ಖರ್ಚು, ಲಾಭ–ನಷ್ಟ, ಆಸ್ತಿ–ಜವಾಬ್ದಾರಿ ತಃಖ್ತೆ ಹಾಗೂ ಅನುಪಾಲನಾ ವರದಿಗೆ ಅನುಮೋದನೆ ಪಡೆಯುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. 2026–27ನೇ ಸಾಲಿನ ಅಂದಾಜು ಬಜೆಟ್ ಗೂ ಸಭೆಯಲ್ಲಿ ಮಂಜೂರಾತಿ ಪಡೆಯಲಾಗುವುದು ಎಂದರು.
₹15 ಕೋಟಿ ಸಾಲ ಬಾಕಿ
ಬ್ಯಾಂಕ್ ನಿಂದ ಪಡೆದ ಅಲ್ಪಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ರೈತರು ಸಕಾಲದಲ್ಲಿ ಮರುಪಾವತಿಸಬೇಕು ಎಂದು ಸುರೇಶ್ ಮನವಿ ಮಾಡಿದರು. ಸುಮಾರು ₹15 ಕೋಟಿ ಸಾಲ ಬಾಕಿ ಉಳಿದಿದ್ದು, ಇದರಿಂದ ಬ್ಯಾಂಕ್ ಗೆ ಹೊಸ ಸಾಲ ನೀಡುವ ಸಾಮರ್ಥ್ಯ ಕುಂಠಿತವಾಗಿದೆ. ಈಗಾಗಲೇ ಸಾಲ ಪಡೆದಿರುವ ರೈತರು ಸಕಾಲದಲ್ಲಿ ಮರುಪಾವತಿ ಮಾಡಿ, ಶೇ 3ರ ಬಡ್ಡಿದರದಲ್ಲಿ ಮರು ಸಾಲ ಪಡೆಯುವುದರೊಂದಿಗೆ ಇತರ ರೈತರಿಗೆ ಸಾಲ ನೀಡಲು ಸಹಕರಿಸಬೇಕು ಎಂದು ಕೋರಿದರು.
ಕೃಷಿ ಸಾಲ ಪಡೆದು ಮರುಪಾವತಿ ಮಾಡದೆ ಸುಸ್ತಿದಾರರಾಗಿರುವ ರೈತರು ಅಡಮಾನವಿಟ್ಟಿರುವ ಜಮೀನಿನ ಪಹಣಿಯಲ್ಲಿ ಮಾಲೀಕ ರೈತನ ಹೆಸರಿನ ಬದಲಿಗೆ ಬ್ಯಾಂಕ್ ಹೆಸರನ್ನು ನಮೂದಿಸುವ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸಂಬಂಧಿಸಿದ ಜಮೀನಿನ ಮಾರಾಟ, ಖರೀದಿ ಹಾಗೂ ಸಾಲ ಪಡೆಯುವಿಕೆ ಸೇರಿದಂತೆ ವಿವಿಧ ವ್ಯವಹಾರಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು. ಜಮೀನಿನ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ತಮ್ಮ ಜಮೀನು ಉಳಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪಿ.ಎಲ್.ಡಿ. ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆಯಂತೆಯೇ ಪ್ರತಿ ವರ್ಷ ನಡೆಯುವ ಈ ಬಾರಿಯ ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಡಿ.ಎನ್. ರಾಮಚಂದ್ರ, ನಿರ್ದೇಶಕರಾದ ತಿಮ್ಮನಾಯಕನಹಳ್ಳಿ ಆನಂದ್, ಕೆ.ಪಿ. ಕಿಶೋರ್, ಬೈರಪ್ಪ, ನಾಗರಾಜ್, ವ್ಯವಸ್ಥಾಪಕ ಜಿ.ಆರ್. ವೇಣುಗೋಪಾಲ್, ಟಿ.ಸಿ. ಶ್ಯಾಮಲ, ಎ. ಪ್ರವೀಣ್ಕುಮಾರ್, ಡಿ. ಚಂದ್ರಶೇಖರ್ ಇದ್ದರು.

