Sidlaghatta : “ಸರ್ಕಾರಿ ಕಚೇರಿಗಳಿಗೆ ಜನರು ಅಲೆಯುವುದನ್ನು ತಪ್ಪಿಸಿ, ಆಡಳಿತವೇ ಜನರ ಬಳಿಗೆ ಬರಬೇಕು” ಎಂಬ ಆಶಯದೊಂದಿಗೆ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಘೋಷವಾಕ್ಯದಡಿ “ಪ್ರಜಾಸೇವೆ ಆಂದೋಲನ” ಆರಂಭಗೊಂಡಿದೆ. ಇದರ ಮೊದಲ ಜನಸ್ಪಂದನ ಸಭೆ ಸಾದಲಿ ಹೋಬಳಿಯಲ್ಲಿ ಶನಿವಾರ ನಡೆಯಿತು.
In English: The first outreach meeting of the “Prajaseve Andolana” — the taluk administration’s new door-to-door grievance redressal drive — was held at the Sadali Government PU College, bringing together taluk-level officials from multiple departments to receive and resolve villagers’ applications on the spot.
ಸಾದಲಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಭೆಯಲ್ಲಿ ತಲಕಾಯಲಬೆಟ್ಟ, ಸಾದಲಿ, ಈ.ತಿಮ್ಮಸಂದ್ರ, ದಿಬ್ಬೂರಹಳ್ಳಿ ಹಾಗೂ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಬಿ.ಎನ್.ರವಿಕುಮಾರ್, “ಸಾರ್ವಜನಿಕರು ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ತಾಲ್ಲೂಕು ಕೇಂದ್ರಕ್ಕೆ ಪದೇಪದೇ ಅಲೆದಾಡುವ ಪರಿಸ್ಥಿತಿ ಇರಬಾರದು. ಜನರಿರುವಲ್ಲಿಯೇ ಸರ್ಕಾರಿ ಸೇವೆ ದೊರೆಯಬೇಕು. ಅಧಿಕಾರಿಗಳು ಸ್ವೀಕರಿಸುವ ಅರ್ಜಿಗಳನ್ನು ಪರಿಶೀಲಿಸಿ, ಒಂದು ವಾರದೊಳಗೆ ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಸೂಚಿಸಿದರು.
“ಪ್ರಜಾಸೇವೆ ಆಂದೋಲನ ಆರಂಭಿಸುವ ಸಂದರ್ಭದಲ್ಲಿ ಕೆಲ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಕಾರ್ಯಕ್ರಮದ ಉದ್ದೇಶ ಮತ್ತು ಪ್ರಯೋಜನ ಈಗ ಜನರಿಗೆ ಅರ್ಥವಾಗಿದೆ. ಸಾರ್ವಜನಿಕರು ಸಹಕಾರ ನೀಡಿದಾಗ ಮಾತ್ರ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಲು ಸಾಧ್ಯ” ಎಂದು ಹೇಳಿದರು.
ಹಲವು ಸೇವೆ ಒಂದೇ ಕಡೆ:
ರಸ್ತೆ ಒತ್ತುವರಿ ತೆರವು, ಪೌತಿ ಖಾತೆ, ಪಹಣಿ ತಿದ್ದುಪಡಿ, ಖಾತೆ ಬದಲಾವಣೆ, ಇ–ಸ್ವತ್ತು, ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ಪಿಂಚಣಿ, ಮನಸ್ವಿನಿ ಯೋಜನೆ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳದಲ್ಲೇ ಅರ್ಜಿ ಸ್ವೀಕರಿಸಿ, ಪರಿಹಾರ ಕಲ್ಪಿಸಲು ಕ್ರಮ ಕೈಗೊಂಡರು. ಕಂದಾಯ, ಪಂಚಾಯತ್ ರಾಜ್, ಕೃಷಿ, ನೀರಾವರಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಾಬ್ ಕಾರ್ಡ್ ವಿತರಣೆ:
ಪ್ರಜಾಸೇವೆ ಆಂದೋಲನದ ಅಂಗವಾಗಿ ವಿಬಿ–ಜಿ–ರಾಮ್–ಜಿ ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ತೆರೆಯಲಾಗಿತ್ತು. ಯೋಜನೆಯ ಕುರಿತ ಕರಪತ್ರಗಳನ್ನು ವಿತರಿಸಿ, ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. ಶಾಸಕ ಬಿ.ಎನ್.ರವಿಕುಮಾರ್ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ.ಆರ್ ಅವರು ತಲಕಾಯಲಬೆಟ್ಟ, ಈ.ತಿಮ್ಮಸಂದ್ರ, ದಿಬ್ಬೂರಹಳ್ಳಿ, ಸಾದಲಿ ಹಾಗೂ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿಗಳ ಫಲಾನುಭವಿಗಳಿಗೆ ಯೋಜನೆಯ ಹೊಸ ಜಾಬ್ ಕಾರ್ಡ್ ಗಳನ್ನು ವಿತರಿಸಿದರು.
ಸಂಜೀವಿನಿ ಉತ್ಪನ್ನಗಳ ಪ್ರದರ್ಶನ:
ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಸೀರೆ, ತರಕಾರಿ ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಾಟಿ ವೈದ್ಯಕೀಯ ಸೇವೆ, ಆರೋಗ್ಯ ತಪಾಸಣಾ ಶಿಬಿರ ಹಾಗೂ ಗೃಹಬಳಕೆಯ ವಸ್ತುಗಳ ಖರೀದಿಗೆ ಸಂಬಂಧಿಸಿದ ಮಳಿಗೆಗಳನ್ನೂ ತೆರೆಯಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ.ಆರ್ ಮಾತನಾಡಿ, ವಿಬಿ–ಜಿ–ರಾಮ್–ಜಿ ಯೋಜನೆ, ವಸತಿ ಯೋಜನೆಯಡಿ ಮಂಜೂರಾದ ನಿವೇಶನ ಹಾಗೂ ಹಕ್ಕುಪತ್ರಗಳು ಮತ್ತು ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳು ಹಾಗೂ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಹೋಬಳಿ ಮಟ್ಟದಲ್ಲಿ ಮುಂದುವರಿಕೆ:
ತಹಶೀಲ್ದಾರ್ ಗಗನಸಿಂಧು ಮಾತನಾಡಿ, “ಪ್ರಜಾಸೇವೆ ಆಂದೋಲನ”ದ ಮೂಲಕ ಆಡಳಿತ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವುದರಿಂದ ಜನರು ಒಂದೇ ದಿನದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಇತರ ಹೋಬಳಿಗಳಲ್ಲಿಯೂ ಇಂತಹ ಜನಸ್ಪಂದನ ಸಭೆಗಳನ್ನು ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಭೆಯಲ್ಲಿ ತಾಲ್ಲೂಕು ಆಡಳಿತಾಧಿಕಾರಿ ಅಬಿದ್. ಎಸ್.ಎಸ್., ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ತಾಲ್ಲೂಕು ವಸತಿ ಯೋಜನಾಧಿಕಾರಿ ನಾಗೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಟಿ.ಐ.ಇ.ಸಿ, ಎನ್.ಆರ್.ಎಲ್.ಎಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

