Home News 74 ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭ

74 ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭ

0
Sidlaghatta 74 Republic Day Program

Sidlaghatta :

ದೇಶದ ಏಳಿಗೆಯು ಯುವಜನತೆಯ ಮೇಲೆ ಅವಲಂಬಿಸಿದ್ದು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ನಿರ್ಮೂಲನೆ ಮಾಡಿ ರಾಷ್ಟ್ರದ ಪರಿವರ್ತನೆಗೆ ಯುವಜನತೆ ಮುಂದಾಗಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜನೆ ಮಾಡಲಾಗಿದ್ದ 74ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅತಿ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿರುವ ಹಾಗೂ ಯುವಶಕ್ತಿಯಿಂದ ಕೂಡಿರುವ ರಾಷ್ಟ್ರವಾದ ಭಾರತವನ್ನು ಎಲ್ಲಾ ದೇಶಗಳಿಗಿಂತಲೂ ಅತ್ಯುನ್ನತ ಸ್ಥಿತಿಗೆ ಕರೆದೊಯ್ಯಬೇಕಾದಂತಹ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ, ಅವುಗಳನ್ನು ಬುಡ ಸಮೇತವಾಗಿ ಕಿತ್ತೊಗೆಯಬೇಕಾದಂತಹ ಮಾನಸಿಕ ಧೈರ್ಯವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರದ ಹಿರಿಮೆಯ ಬಗ್ಗೆ ತಿಳುವಳಿಕೆ ನೀಡುವ ಜೊತೆಗೆ ದೇಶದ ಸಂವಿಧಾನದ ಉದ್ದೇಶಗಳು, ರಚನೆ ಮಾಡಿದ ರೀತಿ, ಅದನ್ನು ಅನಸರಿಸಬೇಕಾದಂತಹ ಅನಿವಾರ್ಯತೆ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ಭಾರತೀಯರ ಐಕ್ಯತೆಯ ಸಂಕೇತವಾಗಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದೆ. ಈ ದೇಶದ ಪ್ರತಿಯೊಬ್ಬರೂ ನಾವು ಭಾರತೀಯರು ಎಂಬ ಭಾವನೆ ಬೆಳೆಸಿಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಗಣತಂತ್ರ ವ್ಯವಸ್ಥೆಯ ಚೌಕಟ್ಟಿನಲ್ಲಿ, ಜಾತ್ಯತೀತ ಮೌಲ್ಯಗಳ ಪರಧಿಯಲ್ಲಿ ಮತ್ತು ಭ್ರಾತೃತ್ವದ ಬೆಸುಗೆಯಲ್ಲಿ ಸತ್ಯ,ನಿಷ್ಠೆ, ಪ್ರಾಮಾಣಿಕತೆಯಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಕಾರಗೊಳಿಸಲು ಮತ್ತಷ್ಟು ಸಾಂಘಿಕವಾಗಿ ಶ್ರಮಿಸೋಣ. ತನ್ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆದರ್ಶಗಳನ್ನು ಎತ್ತಿ ಹಿಡಿಯೋಣ ಎಂದರು.

ಇದೇ ಸಂಧರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ವಿವಿಧ ಮಾದರಿಯ ಕವಾಯತುಗಳನ್ನು ಆಯೋಜನೆ ಮಾಡಲಾಗಿತ್ತು.

ತಾಲ್ಲೂಕು ಪಂಚಾಯಿತಿ ಇಓ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್, ಉಪಾಧ್ಯಕ್ಷ ಅಫ್ಸರ್‌ಪಾಷ, ಪೌರಾಯುಕ್ತ ಆರ್.ಶ್ರೀಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಲೆಫ್ಟಿನೆಂಟ್ ಕರ್ನಲ್ ಎಂ.ವಿ.ಸುನಿಲ್ ಕುಮಾರ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version