
Sidlaghatta : ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೇಲೆ ಜನರ ವಿಶ್ವಾಸ ಹೊರಟುಹೋಗಿದೆ ಹೀಗಾಗಿ AIMIM ಪಕ್ಷ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ರಾಜ್ಯಾಧ್ಯಕ್ಷ ಲತೀಫ್ ಖಾನ್ ಅಮೀರ್ ಖಾನ್ ಪಠಾನ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ನಜಮ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಎ ಐ ಎಂ ಐ ಎಂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಜಾತ್ಯತೀತ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದು ನಿಜ. ಆದರೆ ಅಧಿಕಾರಕ್ಕಾಗಿ ಜೆಡಿಎಸ್ ಪಕ್ಷ ಭಾರತೀಯ ಜನತಾ ಪಾರ್ಟಿಯೊಂದಿಗೆ ಕೈಜೋಡಿಸಿತು. ಹೀಗಾಗಿ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದೇವೆ. ಜೊತೆಗೆ ಸ್ಥಳೀಯ ಪುರಸಭೆ, ನಗರಸಭೆ, ಗ್ರಾಮ ಪಂಚಾಯಿತಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಮಾತು ಮರೆತಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರನ್ನು ಕೇವಲ ಮತ ಬ್ಯಾಂಕುಗಳಾಗಿ ಬಳಸಿಕೊಂಡಿದ್ದಾರೆ ವಿನಃ ಅವರಿಗೆ ರಾಜಕೀಯ ಅಧಿಕಾರ ನೀಡುವ ವಿಚಾರ ಬಂದಾಗ ಹಿಂದಕ್ಕೆ ಸರಿಯುವ ಕಾಂಗ್ರೆಸ್ ಪಕ್ಷದ ನೀತಿಯನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ ಎಂದು ಜರಿದರು.
ದಲಿತರು ಮತ್ತು ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರು ಸಂಘಟಿತರಾದರೆ ಎಲ್ಲ ರಂಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದಾಗಿದೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಂಸದ ಬ್ಯಾರಿಸ್ಟರ್ ಅಸದ್ ಉದ್ದೀನ್ ಅವರು ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೆ ಶಕ್ತಿ ನೀಡುವ ಕೆಲಸವನ್ನು ಜನ ಮಾಡಿದರೆ ಮಾತ್ರ ಬದಲಾವಣೆ ತರಲು ಸಾಧ್ಯ ಎಂದರು.
ಎ ಐ ಎಂ ಐ ಎಂ ಜಿಲ್ಲಾಧ್ಯಕ್ಷ ಮಹಬೂಬ್ ಖಾನ್ ಮಾತನಾಡಿ, ಶಿಡ್ಲಘಟ್ಟ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಗರಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೂ ಸ್ಥಳೀಯ ಶಾಸಕರು ಮಾತ್ರ ಈ ವಿಚಾರದಲ್ಲಿ ಚಕಾರ ಎತ್ತುತ್ತಿಲ್ಲ. ಅವರಿಗೆ ಕೇವಲ ಅಲ್ಪಸಂಖ್ಯಾತರ ಮತಗಳು ಮಾತ್ರ ಬೇಕು. ಅವರ ಸಂಕಷ್ಟಗಳ ಬಗ್ಗೆ ಯಾವುದೇ ರೀತಿ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ನೀತಿಯನ್ನು ಪ್ರಸ್ತಾಪಿಸಿ ಜೈ ಭೀಮ್ ಜೈ ಭೀಮ್ ಘೋಷಣೆಯೊಂದಿಗೆ ಏಐಎಂಐಎಂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಹಕರಿಸಬೇಕೆಂದು ಪಕ್ಷದ ಎಲ್ಲಾ ಮುಖಂಡರು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಮತ್ತು ಭಾರತೀಯ ಜನತಾ ಪಾರ್ಟಿಯ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಎ ಐ ಎಂ ಐ ಎಂ ಪಕ್ಷದ ಬೆಂಗಳೂರು ಉಸ್ತುವಾರಿ ರಹಮತ್ ಉಲ್ಲಾ ತೈಯಬ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮಹಮ್ಮದ್ ಶರ್ಫೂದ್ದೀನ್, ಪ್ರಧಾನ ಕಾರ್ಯದರ್ಶಿ ಮಝಹರ್ ಷರೀಫ್, ದಾವಣಗೆರೆ ಜಿಲ್ಲಾಧ್ಯಕ್ಷ ಮಹಮ್ಮದ್ ಅಲಿ ಶೇಕ್, ಜಿಲ್ಲಾ ಉಸ್ತುವಾರಿ ನವಾಜ್, ಮುನೀರ್ ಮಮ್ಮದ್ ರಿಯಾಜ್ ಹಾಜರಿದ್ದರು.