Home News ಗ್ರಾಮೀಣ ಪ್ರತಿಭೆ ಆಕರ್ಷ್‌ ನ ಸಾಧನೆಗೆ ಅಭಿನಂದನೆಗಳ ಮಹಾಪೂರ

ಗ್ರಾಮೀಣ ಪ್ರತಿಭೆ ಆಕರ್ಷ್‌ ನ ಸಾಧನೆಗೆ ಅಭಿನಂದನೆಗಳ ಮಹಾಪೂರ

0

Taladummanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯ ರೈತ ಕುಟುಂಬದ ಟಿ.ಎಂ.ಆಕರ್ಷ್ ಕೇಂದ್ರ ಲೋಕ ಸೇವಾ ಆಯೋಗವು ನಡೆಸಿದ ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆಯಲ್ಲಿ 20 ನೇ ರ್‍ಯಾಂಕ್ ಪಡೆದಿದ್ದಾನೆ.

ಸಾಧಾರಣ ರೈತ ಕುಟುಂಬದಲ್ಲಿ ಜನಿಸಿದ ಆಕರ್ಷ್ ಓದುವ ಜತೆ ಜತೆಗೆ ತನ್ನ ತಂದೆ ತಾಯಿಯೊಂದಿಗೆ ಹೊಲ ಗದ್ದೆ ತೋಟಗಳಲ್ಲಿ ಕೆಲಸ ಮಾಡಿಕೊಂಡೆ ಬೆಳೆದವನು. ಇದೀಗ ಕೇಂದ್ರ ಲೋಕಸೇವಾ ಆಯೋಗದ ಐ.ಎಫ್‌.ಎಸ್ ಪರೀಕ್ಷೆಯಲ್ಲಿ ದೇಶದಲ್ಲಿಯೆ 20 ನೇ ರ್‍ಯಾಂಕ್ ಪಡೆದಿದ್ದು ರೈತ ಕುಟುಂಬದ ಈ ಯುವಕನ ಸಾಧನೆಗೆ ಜಿಲ್ಲೆಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಐ.ಎ.ಎಸ್, ಐ.ಪಿ.ಎಸ್, ಐ.ಎಫ್‌.ಎಸ್, ಕೆ.ಎ.ಎಸ್‌ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಳ್ಳಿಯ ರೈತ ಕುಟುಂಬದ ಮಕ್ಕಳಿಂದಲೂ ಸಾಧ್ಯ ಎಂದು ಆಕರ್ಷ್ ಸಾಧಿಸಿ ನಿರೂಪಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾನೆ.

ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ, ಗುರಿಯ ಬೆನ್ನು ಬಿದ್ದು ಓಡುವ ಮನಸ್ಸು ಇದ್ದರೆ ಸಾಧನೆ ಮಾಡುವುದು ಕಷ್ಟವೇನಲ್ಲ, ಸಾಧನೆಗೆ ಬಡತನ, ಗ್ರಾಮೀಣ ಹಿನ್ನಲೆ ಯಾವುದೂ ಅಡ್ಡಿಯಾಗದು ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದಲ್ಲಿಯೆ 20 ನೇ ರ್‍ಯಾಂಕ್ ಪಡೆದ ಆಕರ್ಷ್ ಸಾಧಿಸಿ ತೋರಿಸಿದ್ದಾನೆ.

Sidlaghatta Akarsh IFS Exam Rank

ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯ ರೈತ ಮುನೇಗೌಡ, ಸೌಭಾಗ್ಯ ದಂಪತಿಯ ಪುತ್ರ ಆಕರ್ಷ್ ಪಿಯುಸಿಯವರೆಗೂ ಹುಟ್ಟೂರು ತಲದುಮ್ಮನಹಳ್ಳಿಯಲ್ಲೇ ಇದ್ದು, ಹೆತ್ತವರೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವನು. ಬೆಂಗಳೂರಿನ ಜಿ.ಕೆ.ವಿ.ಕೆ ಯಲ್ಲಿ ಕೃಷಿ ವಿಜ್ಞಾನ ಪದವಿ ಮುಗಿಸಿದ ನಂತರ ದೆಹಲಿಯಲ್ಲಿ ಕೃಷಿಯ ಸ್ನಾತಕೋತ್ತರ ಪದವಿಗೆ ಸೇರಿಕೊಂಡು ಅಲ್ಲೇ ಐ.ಎಫ್‌.ಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದಾನೆ.

ಕೊನೆಗೂ ಪರೀಕ್ಷೆಯಲ್ಲಿ 20ನೇ ರ್‍ಯಾಂಕ್‌ ನೊಂದಿಗೆ ಉತ್ತೀರ್ಣರಾಗಿದ್ದಾನೆ. ಹೆತ್ತವರ ಖುಷಿಗೆ ಪಾರವೇ ಇಲ್ಲವಾಗಿದೆ. ಬಂಧು ಬಳಗ ಸೇರಿದಂತೆ ನಾನಾ ಸಂಘ ಸಂಸ್ಥೆಗಳಿಂದ ಅಭಿನಂದನೆಗಳ ಮಹಾಪೂರವೇ ಆಕರ್ಷ್‌ನ ಸಾಧನೆಗೆ ಹರಿದು ಬರುತ್ತಿದೆ.

“ನಾನು ದೆಹಲಿಗೆ ಹೋದ ನಂತರ ಉತ್ತರ ಭಾರತದ ಬಹುತೇಕ ವಿದ್ಯಾರ್ಥಿಗಳು ಯು.ಪಿ.ಎಸ್.ಸಿ ಪರೀಕ್ಷೆ ಬರೆಯುವುದನ್ನು ಕಂಡು ಅದರೆಡೆಗೆ ಆಕರ್ಷಿತನಾದೆ. ನನ್ನ ಕೃಷಿ ಹಿನ್ನೆಲೆ, ಕೃಷಿ ಪದವಿ, ಪರಿಸರ ಪ್ರೇಮ ನನ್ನನ್ನು ಐ.ಎಫ್.ಎಸ್ ಬರೆಯಲು ಪ್ರೇರೇಪಿಸಿತು. ನನ್ನ ಪರೀಕ್ಷಾ ಸಿದ್ಧತೆ ಹಾಗೂ ಅದನ್ನು ಎದುರಿಸಿದ ಅನುಭವವನ್ನು ಇತರ ಆಸಕ್ತ ವಿದ್ಯಾರ್ಥಿಗಳಿಗೂ ಹಂಚುವ ಹಂಬಲವಿದೆ. ಮುಂದೆ ಅರಣ್ಯ, ವನ್ಯಜೀವಿ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಲಸ ಮಾಡುವ ಕನಸನ್ನು ಹೊಂದಿದ್ದೇನೆ” ಎಂದು ಆಕರ್ಷ್ ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version