Taladummanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯ ಟಿ.ಎಂ.ಆಕರ್ಷ್ IFS(Indian Forest Service) ಪರೀಕ್ಷೆಯಲ್ಲಿ 20 ನೇ ರ್ಯಾಂಕ್ ಪಡೆದಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022 ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಮೊದಲಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಐ.ಎಫ್.ಎಸ್ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕಳೆದ ತಿಂಗಳು ಸಂದರ್ಶನದಲ್ಲೂ ಭಾಗಿಯಾಗಿದ್ದರು. ಶನಿವಾರ ಫಲಿತಾಂಶ ಪ್ರಕಟವಾಗಿದ್ದು, ಟಿ.ಎಂ.ಆಕರ್ಷ್ ಅವರಿಗೆ 20 ನೇ ರ್ಯಾಂಕ್ ಬಂದಿದೆ.
ಟಿ.ಎಂ.ಆಕರ್ಷ್ ಅವರು, ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯ ಟಿ.ಡಿ.ಮುನೇಗೌಡ ಮತ್ತು ಆರ್.ಸೌಭಾಗ್ಯ ದಂಪತಿಯ ಮಗ.
ತಲದುಮ್ಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1-5 ನೇ ತರಗತಿಯವರೆಗೆ, ಶಿಡ್ಲಘಟ್ಟದ ಶಾರದಾ ವಿದ್ಯಾಸಂಸ್ಥೆಯಲ್ಲಿ 6-8 ನೇ ತರಗತಿಯವರೆಗೆ, ಶಿಡ್ಲಘಟ್ಟದ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ 9-10 ನೇ ತರಗತಿಯವರೆಗೆ, ಪಿಯುಸಿಯನ್ನು ವಿಜಯಚೇತನ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ್ದು, ಬಿ.ಎಸ್.ಸಿ(ಕೃಷಿ) ಪದವಿಯನ್ನು ಜಿ.ಕೆ.ವಿ.ಕೆಯಲ್ಲಿ ಪಡೆದಿದ್ದಾರೆ.
ದೆಹಲಿಗೆ ಹೋದ ಅವರು ಒಂದು ವರ್ಷ ಕಾಲ ಎಂ.ಎಸ್.ಸಿ ವ್ಯಾಸಂಗ ಮಾಡಿ, ನಂತರ ಯು.ಪಿ.ಎಸ್.ಸಿ ಪರೀಕ್ಷೆಯ ತಯಾರಿ ನಡೆಸಿದರು.
“2018 ರಲ್ಲಿ ಪದವಿ ಪಡೆದೆ. 2020 ರವರೆಗೆ ಎಂ.ಎಸ್.ಸಿ ಓದುತ್ತಿದ್ದೆ. ನಂತರ ಯು.ಪಿ.ಎಸ್.ಸಿ ಗೆ ತಯಾರಿ ಆರಂಭಿಸಿದೆ. ಅಣಕು ಪರೀಕ್ಷೆಗಳನ್ನು ಪಡೆದುಕೊಂಡಿದ್ದೆ. ಪ್ರಿಲಿಮ್ಸ್ ಪಾಸಾಯಿತು. ಐ.ಎಫ್.ಎಸ್. ಮುಖ್ಯ ಪರೀಕ್ಷೆಯನ್ನೂ ಚೆನ್ನಾಗಿ ಮಾಡಿದೆ. ಸಂದರ್ಶನದಲ್ಲೂ ಅತ್ಯುತ್ತಮವಾಗಿ ಉತ್ತರಿಸಿದ್ದೆ. ನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ಶಿಸ್ತು ಮತ್ತು ಶ್ರಮವನ್ನು ಈ ಪರೀಕ್ಷೆಯು ಬೇಡುತ್ತದೆ. ಉತ್ತಮ ತಯಾರಿ ಆತ್ಮವಿಶ್ವಾಸ ನೀಡುತ್ತದೆ. ಅದುವೇ ನನ್ನ ಧೈರ್ಯವಾಗಿತ್ತು” ಎಂದು ಟಿ.ಎಂ.ಆಕರ್ಷ್ ತಮ್ಮ ಸಂತಸವನ್ನು ಹಂಚಿಕೊಂಡರು.