Home News ಬೈಪಾಸ್ ರಸ್ತೆ ನಿರ್ಮಿಸಲು ಸೂಚನೆ

ಬೈಪಾಸ್ ರಸ್ತೆ ನಿರ್ಮಿಸಲು ಸೂಚನೆ

0
Sidlaghatta National Highway Bypass Road Construction

Sidlaghatta : ರಾಷ್ಟ್ರೀಯ ಹೆದ್ದಾರಿ 234 ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ನಗರದ ಪ್ರವೇಶ ದ್ವಾರದಿಂದ ಹಿಡಿದು ಚಿಂತಾಮಣಿ ರಸ್ತೆಗೆ ಸಂಪರ್ಕ ಕಲ್ಪಿಸಲು ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಬಿ.ಎನ್.ರವಿಕುಮಾರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ 234 ಚತುಷ್ಪಥ ರಸ್ತೆ ನಗರದ ಅಮ್ಮನಕೆರೆ ಕಟ್ಟೆಯಿಂದ ಹಿಡಿದು ಬಸ್ ನಿಲ್ದಾಣ ಮುಖಾಂತರ ಮಯೂರ ವೃತ್ತದಲ್ಲಿ ಹಾದು ಹೋದರೆ ಈಗಾಗಲೇ ಇಲ್ಲಿ ವಾಸಿಸುವ ಜನರ ಮನೆ, ಅಂಗಡಿಗಳು ಹಾಳಾಗುತ್ತವೆ. ಹಾಗಾಗಿ ನಗರದ ಹೊರಗಡೆ ಬೈಪಾಸ್ ರಸ್ತೆ ನಿರ್ಮಾಣ ಮಾಡಿದಲ್ಲಿ ನಾಗರಿಕರ ಹಿತರಕ್ಷಣೆಯಾಗುತ್ತದೆ ಎಂಬ ಜನರ ಮನವಿಯ ಮೇರೆಗೆ ಶನಿವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ನಗರದ ಅಮ್ಮನಕೆರೆ ಕಟ್ಟೆಯಿಂದ ಚಿಂತಾಮಣಿ ರಸ್ತೆಯ ಉದ್ಯಾನವನದವರೆಗೂ ರಸ್ತೆಯ ಅಕ್ಕಪಕ್ಕದಲ್ಲಿ ಬಹಳಷ್ಟು ಮನೆ, ಮಳಿಗೆಗಗಳು ಇರುವುದರಿಂದ ಇಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಮುಂದಾದರೆ ಇಲ್ಲಿನ ಜನ ಬೀದಿ ಪಾಲಾಗುತ್ತಾರೆ. ಜನರ ಹಿತದೃಷ್ಟಿಯಿಂದ ನಗರದ ಹೊರಗಡೆಯಿಂದ ಬೈಪಾಸ್ ರಸ್ತೆ ನಿರ್ಮಾಣದಿಂದ ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದರಿಂದ ಸ್ಥಳೀಯರಿಗೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಲ್ಲಿಕಾರ್ಜುನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಮಧುಗಿರಿಯಿಂದ ಪ್ರಾರಂಭವಾಗಿ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು ಗಡಿಯವರೆಗೆ ಚತುಷ್ಪಥ ರಸ್ತೆ ಮಾಡಲು ಅಳತೆ ಮತ್ತು ಸರ್ವೆ ಕಾರ್ಯ ಮುಗಿದಿದೆ. ಶಿಡ್ಲಘಟ್ಟ ನಗರದಲ್ಲಿ ಬೈಪಾಸ್ ರಸ್ತೆಗೆ ಜಾಗ ಗುರುತಿಸಿದ ನಂತರ ಸ್ಥಳೀಯ ಶಾಸಕರ ಗಮನಕ್ಕೆ ತಂದ ನಂತರವಷ್ಟೆ ಮುಂದಿನ ಕಾಮಗಾರಿ ಮಾಡಲು ಮುಂದಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಸ್.ರಾಘವೇಂದ್ರ, ಮಂಜುನಾಥ್, ಮುಖಂಡರಾದ ತಾದೂರು ರಘು, ಬಿ.ನಾರಾಯಣಸ್ವಾಮಿ, ವೇಣುಗೋಪಾಲ್, ಸುರೇಶ್, ಶ್ರೀನಾಥ್, ಲಕ್ಷ್ಮಿನಾರಾಯಣ (ಲಚ್ಚಿ) ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version