Sidlaghatta : ನಗರದ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಮುಂದಿನ ದಿನಗಳಲ್ಲಿ “ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ”ವಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
ಗುರುವಾರ ಭವನದ ಕಾಮಗಾರಿಯನ್ನು ವೀಕ್ಷಿಸಿದ ಅವರು, ಬಹು ವರ್ಷಗಳ ಹೋರಾಟದ ಫಲವಾಗಿ ಭವನ ನಿರ್ಮಾಣಗೊಳ್ಳುತ್ತಿದೆ. ಸದ್ಯ ಮೊದಲ ಮಹಡಿಯ ಛಾವಣಿ ಕಾಮಗಾರಿ ನಡೆಯುತ್ತಿದ್ದು, ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಧಿಕಾರಾವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸುವ ಸಂಕಲ್ಪ ಹೊಂದಲಾಗಿದೆ ಎಂದು ತಿಳಿಸಿದರು.
ಭವನವನ್ನು ಕೇವಲ ಸಮುದಾಯದ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ವಿದ್ಯಾರ್ಥಿಗಳು ಮತ್ತು ಯುವಜನರ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ಅಧ್ಯಯನ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ IAS, KAS ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಿ ಉಚಿತ ತರಬೇತಿ ನೀಡುವ ಉದ್ದೇಶವಿದೆ ಎಂದರು.
ಅಧ್ಯಯನ ಕೇಂದ್ರದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅಗತ್ಯವಾದ ಶೈಕ್ಷಣಿಕ ಸಂಪನ್ಮೂಲ ಮತ್ತು ಮಾಹಿತಿಯನ್ನು ಸುಲಭವಾಗಿ ದೊರಕುವಂತೆ ಮಾಡಲಾಗುವುದು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಧ್ಯಯನ ಸಾಮಗ್ರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ತಾಲ್ಲೂಕಿಗೆ ಶೈಕ್ಷಣಿಕ ಬಲ
ಅಂಬೇಡ್ಕರ್ ಭವನವು ಅಧ್ಯಯನ ಕೇಂದ್ರವಾಗಿ ರೂಪುಗೊಂಡರೆ ಶಿಡ್ಲಘಟ್ಟ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಮಹತ್ವದ ಶೈಕ್ಷಣಿಕ ವೇದಿಕೆ ದೊರೆಯಲಿದೆ. ದುಬಾರಿ ತರಬೇತಿ ಕೇಂದ್ರಗಳಿಗಾಗಿ ಬೆಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಕಡಿಮೆಯಾಗಲಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲು ಅವಕಾಶ ಸಿಗಲಿದೆ.
ಡಿಜಿಟಲ್ ಗ್ರಂಥಾಲಯ, ಪುಸ್ತಕಗಳು, ಇಂಟರ್ನೆಟ್ ಸೌಲಭ್ಯ ಮತ್ತು ಅಧ್ಯಯನಕ್ಕೆ ಪೂರಕವಾದ ವಾತಾವರಣ ಲಭ್ಯವಾದರೆ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನ ಮತ್ತು ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಲು ನೆರವಾಗಲಿದೆ. ಉದ್ಯೋಗ, ಉನ್ನತ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಒಂದೇ ಸ್ಥಳದಲ್ಲಿ ದೊರೆಯುವುದರಿಂದ ಯುವಜನರು ತಮ್ಮ ಮುಂದಿನ ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆ ಸೂಕ್ತ ಮಾರ್ಗದರ್ಶನ ಪಡೆಯಲು ಸಾಧ್ಯವಾಗಲಿದೆ.
ಇದರ ಜತೆಗೆ ವ್ಯಕ್ತಿತ್ವ ವಿಕಸನ, ವೃತ್ತಿ ಮಾರ್ಗದರ್ಶನ, ವಿಚಾರ ಸಂಕಿರಣ, ಕಾರ್ಯಾಗಾರ ಹಾಗೂ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲು ಕೇಂದ್ರವನ್ನು ಬಳಸಿಕೊಳ್ಳಬಹುದು. ಇದರಿಂದ ಯುವಜನರಲ್ಲಿ ಉದ್ಯೋಗಮುಖಿ ಕೌಶಲ ಹೆಚ್ಚಿಸುವ ಜತೆಗೆ ತಾಲ್ಲೂಕಿನ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ವೇದಿಕೆಯಾಗುವ ನಿರೀಕ್ಷೆಯಿದೆ.
ಭವನವನ್ನು ಬಡವರ ಶುಭ ಸಮಾರಂಭಗಳು, ಸಮುದಾಯದ ಕಾರ್ಯಕ್ರಮಗಳು ಹಾಗೂ ಸರ್ಕಾರಿ ಮತ್ತು ರಾಷ್ಟ್ರೀಯ ಜಯಂತಿಗಳ ಆಚರಣೆಗೂ ಬಳಸಿಕೊಳ್ಳಲಾಗುವುದು. ಅಧ್ಯಯನ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆದು, ಶಿಡ್ಲಘಟ್ಟದಲ್ಲಿ ಮಾದರಿ ಅಂಬೇಡ್ಕರ್ ಅಧ್ಯಯನ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ. ಆರ್., ಸಮಾಜ ಕಲ್ಯಾಣ ಅಧಿಕಾರಿ ಜಗದೀಶ್ ಹಾಗೂ ಮುಖಂಡರಾದ ತಾದೂರು ರಘು, ಕೆ.ಎಸ್. ಮಂಜುನಾಥ್, ಚಿಕ್ಕಮುನಿಯಪ್ಪ, ಕೊತ್ತನೂರು ಲಕ್ಷ್ಮಿಪತಿ, ಟಿ.ವಿ. ಬಚ್ಚರೆಡ್ಡಿ, ಎಸ್.ಎಂ. ರಮೇಶ್, ರಾಮಚಂದ್ರಪ್ಪ, ಜಯಪ್ರಭು, ದ್ಯಾವಪ್ಪ ಹಾಜರಿದ್ದರು.
ತಾಲ್ಲೂಕಿನ ವಿದ್ಯಾರ್ಥಿಗಳಿಗೆ IAS, KAS ಕನಸು ಕಾಣುವಂತೆ ಪ್ರೇರೇಪಿಸುವ ಕಾರ್ಯಕ್ರಮಗಳು ಈ ಹಿಂದೆಯೂ ನಡೆದಿದ್ದವು.
In English: MLA B.N. Ravikumar said the under-construction Dr. B.R. Ambedkar Bhavan in Sidlaghatta will be developed into a “Dr. B.R. Ambedkar Study Center,” offering free coaching rooms for competitive exams like IAS and KAS, a digital library, and career guidance programs for rural students, alongside its community-hall functions. He inspected ongoing first-floor construction work on Thursday and said the goal is to complete and inaugurate it during Social Welfare Minister K.H. Muniyappa’s tenure.

