Sidlaghatta : ಕೆರೆಗಳಲ್ಲಿ ನೀರು ಸಂಗ್ರಹವಾದರೆ ಮಾತ್ರ ಅಂತರ್ಜಲ ಮಟ್ಟ ಸುಧಾರಿಸಿ ಕೊಳವೆಬಾವಿಗಳಲ್ಲಿಯೂ ನೀರು ದೊರೆಯಲು ಸಾಧ್ಯ. ಕೆರೆಗಳು ಅಂತರ್ಜಲ ಅಭಿವೃದ್ಧಿಯ ಮೂಲಾಧಾರ ಎಂದು ಗಂಜಿಗುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ವಿಶ್ವ ಕೆರೆಗಳ ದಿನದ ಅಂಗವಾಗಿ ಗುರುವಾರ ಹಳೆ ಗಂಜಿಗುಂಟೆ ಗ್ರಾಮದ ದ್ಯಾವರಕೆರೆ ಅಂಗಳದಲ್ಲಿ ಗಂಜಿಗುಂಟೆ ಭಾಗದ ಸರಣಿ ಕೆರೆಗಳ ಗುಂಪು ರಚನೆ ಕುರಿತು ಗ್ರಾಮ ವ್ಯವಸ್ಥೆಗಳ ನಾಯಕರ ಸಭೆಯಲ್ಲಿ ಅವರು ಮಾತನಾಡಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪೂರ್ವಿಕರು ರಾಜ-ಮಹಾರಾಜರು ಹಾಗೂ ಪಾಳೇಗಾರರ ಕಾಲದಲ್ಲೇ ಹಲವಾರು ಕೆರೆಗಳನ್ನು ನಿರ್ಮಿಸಿದ್ದಾರೆ. ಅವು ಈ ಭಾಗದ ಜನರ ಜೀವನನಾಡಿಗಳಾಗಿವೆ. ಕೆರೆಗಳ ಪುನಶ್ಚೇತನ, ಸಂರಕ್ಷಣೆ ಮತ್ತು ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಎಫ್.ಇ.ಎಸ್ (FES) ಸಂಸ್ಥೆಯ ಸಹಕಾರದೊಂದಿಗೆ ಸರಣಿ ಕೆರೆಗಳ ಗುಂಪು ರಚಿಸಿ, ಕೆರೆಗಳ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆಗೆ ದೀರ್ಘಕಾಲೀನ ಮುನ್ನೋಟ ಯೋಜನೆ ರೂಪಿಸಬೇಕು. ಸರ್ಕಾರ, ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರ ಪಡೆದು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಎಫ್.ಇ.ಎಸ್ ಸಂಸ್ಥೆಯ ಎನ್.ರಮೇಶ್ ಮಾತನಾಡಿ, ಬಯಲುಸೀಮೆ ಪ್ರದೇಶದಲ್ಲಿ ನದಿಗಳಿಲ್ಲದ ಕಾರಣ ಕೆರೆಗಳೇ ಜನರ ಜೀವನದ ಮೂಲಾಧಾರ. ಸಮುದಾಯದ ಸಕ್ರಿಯ ಸಹಭಾಗಿತ್ವ, ಮಹಿಳಾ ನಾಯಕತ್ವ ಹಾಗೂ ಸಮುದಾಯದ ಉಸ್ತುವಾರಿಯಲ್ಲಿ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ “ಗಂಜಿಗುಂಟೆ ಸರಣಿ ಕೆರೆಗಳ ಗುಂಪು” ರಚಿಸಲಾಗಿದೆ ಎಂದರು.
ಕೆರೆಗಳ ಅಭಿವೃದ್ಧಿಗೆ ಅಗತ್ಯವಿರುವ ತಾಂತ್ರಿಕ ಅಂಶಗಳ ಕುರಿತು ಎಫ್.ಇ.ಎಸ್ ನ ವೈ.ಎನ್. ನರಸಿಂಹಪ್ಪ ಮತ್ತು ಲೀಲಾವತಿ ಮಾಹಿತಿ ನೀಡಿದರು. ಸಮುದಾಯದವರು ಸರಣಿ ಕೆರೆಗಳ ನಕ್ಷೆ ಸಿದ್ಧಪಡಿಸಿ, ಪ್ರಸ್ತುತ ಸ್ಥಿತಿ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ 40ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು. ಕಾಂತರಾಜು, ಪ್ರಸಾದ್, ಕಾರ್ತಿಕ್, ಅರಸೀಕೆರೆ ಮಂಜುನಾಥ್, ವೆಂಕಟಸ್ವಾಮಿ ರೆಡ್ಡಿ, ವೆಂಕಟೇಶ್, ನಾರಾಯಣ ರೆಡ್ಡಿ, ಚಂದ್ರಶೇಖರ ರೆಡ್ಡಿ, ಪ್ರಮೀಳಾ ಹಾಜರಿದ್ದರು.
ಇತ್ತೀಚೆಗೆ ತಾಲ್ಲೂಕಿನ ಗೌಡನ ಕೆರೆಯಲ್ಲಿ ತ್ಯಾಜ್ಯ ಸುರಿಯುತ್ತಿರುವ ಸಮಸ್ಯೆಯೂ ವರದಿಯಾಗಿತ್ತು, ಇದು ಕೆರೆಗಳ ಸಂರಕ್ಷಣೆಯ ಅಗತ್ಯವನ್ನು ಮತ್ತಷ್ಟು ಒತ್ತಿ ಹೇಳುತ್ತದೆ.
In English: Marking World Lakes Day, villagers in Ganjigunte formed a “cascade lakes group” with support from FES (Foundation for Ecological Security) to plan long-term restoration and management of the area’s interconnected tanks. Former gram panchayat president Narasimhamurthy said lake water recharge is essential for groundwater and borewell yields, while FES officials emphasized community-led, women-inclusive stewardship of these historic tanks built by rulers and chieftains generations ago. Over 40 villagers attended the meeting at Old Ganjigunte’s Dyavarakere.

