Sidlaghatta : ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ ಬೆಂಬಲಿತರು ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಮಾಜಿ ಸಚಿವ ವಿ.ಮುನಿಯಪ್ಪ ಅವರ ಹುಟ್ಟೂರಾದ ಹಂಡಿಗನಾಳದಲ್ಲಿ ನಡೆದ ಈ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿತ್ತು. ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಮತದಾನ ನಡೆದ ಸಹಕಾರ ಸಂಘದ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಯಾರು ಆಯ್ಕೆಯಾದರು?
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಅನಸೂಯಮ್ಮ, ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಮುನಿರತ್ನಮ್ಮ, ಹಿಂದುಳಿದ ವರ್ಗ ‘ಎ’ ಮೀಸಲು ಕ್ಷೇತ್ರದಿಂದ ಮುನಿರತ್ನಮ್ಮ ಹಾಗೂ ಹಿಂದುಳಿದ ವರ್ಗ ‘ಬಿ’ ಮೀಸಲು ಕ್ಷೇತ್ರದಿಂದ ಪಾರ್ವತಮ್ಮ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಎಸ್.ನಳಿನ, ರತ್ನಮ್ಮ, ಕಾಂತಮ್ಮ, ಯಶೋಧಮ್ಮ, ಎನ್.ಜಿ.ಶಾಂತಮ್ಮ, ಅನಸೂಯಮ್ಮ, ಮುನಿರತ್ನಮ್ಮ ಮತ್ತು ಶಾರದಮ್ಮ ಚುನಾಯಿತರಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಜೇತ ನಿರ್ದೇಶಕರನ್ನು ಅಭಿನಂದಿಸಿದರು.
ಗೆಲುವಿನ ಬಗ್ಗೆ ಕಾಂಗ್ರೆಸ್ ಮುಖಂಡರು ಏನು ಹೇಳಿದರು?
ಈ ಕುರಿತು ಕಾಂಗ್ರೆಸ್ ಮುಖಂಡ ಬಿ.ಎಂ.ಜಯರಾಂ ಮಾತನಾಡಿ, ಹಂಡಿಗನಾಳದಲ್ಲಿ ನಡೆದ ಈ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯ ವಿಷಯವಾಗಿತ್ತು. ಮಾಜಿ ಸಚಿವ ವಿ.ಮುನಿಯಪ್ಪ ಅವರ ಆಶೀರ್ವಾದ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಸಹಕಾರದಿಂದ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಡೇರಿಯನ್ನು ಉತ್ತಮವಾಗಿ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಡೇರಿ ಕಾರ್ಯದರ್ಶಿ ರೂಪ, ಕಾಂಗ್ರೆಸ್ ಮುಖಂಡರಾದ ಅರುಣ್ ಕುಮಾರ್, ಗೋವಿಂದರಾಜು, ನಾರಾಯಣಸ್ವಾಮಿ, ಗಜೇಂದ್ರ, ಮಂಜುನಾಥ್, ರಕ್ಷಿತ್, ಗೋಪಾಲಕೃಷ್ಣ, ಮುರಳಿ ಸೇರಿದಂತೆ ವಿಜೇತ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
In English: Congress-backed candidates won 11 of the 12 director posts in the Handiganala Women’s Milk Producers’ Cooperative Society election, while JDS-backed candidates won one. The poll took place in the hometown of former minister V. Muniyappa, with police deployed near the voting venue. Elected from reserved constituencies were Anasuyamma (SC), Muniratnamma (ST), Muniratnamma (BC-A) and Parvatamma (BC-B), plus eight from the general category. Congress leader B.M. Jayaram said the party’s candidates won with the blessings of V. Muniyappa and the cooperation of Rajeev Gowda. Cooperative Development Officer Manjunath was the returning officer. This follows a dispute over nomination withdrawals reported earlier.








