ಒಂದೊಂದು ಗೊಂಬೆಯ ಹಿಂದೆ ಒಂದೊಂದು ಕಥೆ: ಮೂರು ತಲೆಮಾರಿನ ಗೊಂಬೆ ಹಬ್ಬ

- Advertisement -
- Advertisement -

Sidlaghatta : ಒಂದೊಂದು ಗೊಂಬೆಯ ಹಿಂದೆ ಒಂದೊಂದು ಕಥೆ, ಒಂದೊಂದು ಸಾಲಿನಲ್ಲಿ ನಾಡಿನ ಸಂಸ್ಕೃತಿಯ ಅನಾವರಣ. ಪುರಾಣದ ಸನ್ನಿವೇಶಗಳಿಂದ ಗ್ರಾಮೀಣ ಬದುಕಿನ ಚಿತ್ರಣದವರೆಗೆ ಹಲವು ಆಯಾಮಗಳನ್ನು ಗೊಂಬೆಗಳ ಮೂಲಕ ಪರಿಚಯಿಸುವ ತಾಲ್ಲೂಕಿನ ಮೇಲೂರು ಗ್ರಾಮದ ಎಂ.ಕೆ.ರವಿಪ್ರಸಾದ್ ಅವರ ಮನೆಯ ಗೊಂಬೆ ಹಬ್ಬವು ಮೂರು ತಲೆಮಾರುಗಳ ಸಂಪ್ರದಾಯ ಮತ್ತು ಕುಟುಂಬದ ಒಡನಾಟಕ್ಕೆ ಸಾಕ್ಷಿಯಾಗಿದೆ.

ದಸರಾ ಬಂತೆಂದರೆ ಅಟ್ಟದ ಮೇಲಿದ್ದ ಗೊಂಬೆಗಳನ್ನು ಕೆಳಗಿಳಿಸಿ, ಅಲಂಕರಿಸಿ ಹಂತ ಹಂತವಾಗಿ ಜೋಡಿಸುವ ಸಂಭ್ರಮ. ಮೈಸೂರು ಅರಮನೆಯ ಗೊಂಬೆ ಕೂರಿಸುವ ಸಂಪ್ರದಾಯದ ಪ್ರೇರಣೆಯಿಂದ ಆಚರಿಸಲಾಗುವ ಈ ಹಬ್ಬವು ರವಿಪ್ರಸಾದ್ ಅವರ ಮನೆಯಲ್ಲಿ ವಿಶಿಷ್ಟ ಸ್ವರೂಪ ಪಡೆದುಕೊಂಡಿದೆ.

ಪುರಾಣದ ಪ್ರಸಂಗಗಳಿಗೆ ಜೀವ ತುಂಬಿದ ಗೊಂಬೆಗಳು

ಪಟ್ಟದ ಗೊಂಬೆ, ಅಮ್ಮನವರ ಮೂರ್ತಿ, ಬೆಣಚುಕಲ್ಲಿನ ಗಣಪತಿ, ಕಾಮಧೇನು, ರಾಘವೇಂದ್ರ ಸ್ವಾಮಿಗಳು, ದಶಾವತಾರದ ಮೂರ್ತಿಗಳು ಸೇರಿದಂತೆ ಹಲವು ಅಪರೂಪದ ಸಂಗ್ರಹಗಳಿವೆ. ಸುಮಾರು ಮೂವತ್ತು ವರ್ಷಗಳ ಹಿಂದಿನ ರಾಮ ಮತ್ತು ಕೃಷ್ಣರ ಮೂರ್ತಿಗಳೂ ಇಲ್ಲಿನ ಆಕರ್ಷಣೆಗಳು.

ರಾಮನು ಗುಹನೊಂದಿಗೆ ವನವಾಸಕ್ಕೆ ತೆರಳುವ ದೃಶ್ಯ, ಶಬರಿ ರಾಮನಿಗೆ ಹಣ್ಣು ತಿನ್ನಿಸುವ ಪ್ರಸಂಗ, ಸಂಜೀವಿನಿ ಪರ್ವತ ಹೊತ್ತು ತರುವ ಹನುಮಂತ, ಜಟಾಯು-ಶ್ರೀರಾಮರ ಮಿಲನದಂತಹ ಸನ್ನಿವೇಶಗಳು ರಾಮಾಯಣವನ್ನು ಕಣ್ಣಿಗೆ ಕಟ್ಟುತ್ತವೆ. ಬೆಣ್ಣೆ ಕದಿಯುವ ಕೃಷ್ಣ, ಗೋಪಿಕೆಯರೊಂದಿಗೆ ಆಟವಾಡುವ ಬಾಲಕೃಷ್ಣನ ದೃಶ್ಯಗಳೂ ಗಮನ ಸೆಳೆಯುತ್ತವೆ.

ಶೆಟ್ಟಪ್ಪ-ಶೆಟ್ಟಮ್ಮ, ಅಂಗಡಿಗೆ ದಿನಸಿ ತರುವ ಗಾಡಿ, ಹಣ್ಣು ಮಾರುವವರು, ಮದುವೆ ಸಮಾರಂಭ, ಮಹಿಳೆಯರ ದೈನಂದಿನ ಕೆಲಸಗಳು ಹಾಗೂ ಭತ್ತದ ಕೊಯ್ಲಿನಲ್ಲಿ ತೊಡಗಿರುವ ರೈತ ಕುಟುಂಬದ ದೃಶ್ಯಗಳು ಗ್ರಾಮೀಣ ಬದುಕನ್ನು ಪರಿಚಯಿಸುತ್ತವೆ. ವಿವಿಧ ಕಸುಬುಗಳ ಜನರು, ಬುಡಕಟ್ಟು ಸಮುದಾಯಗಳು, ಯೋಧರು ಮತ್ತು ವಿವಿಧ ದೇಶಗಳ ಜನರ ಉಡುಗೆ-ತೊಡುಗೆಗಳಿಗೂ ಇಲ್ಲಿ ಜಾಗವಿದೆ.

82 ಬಗೆಯ ಕಾರುಗಳು, 42 ವಿಧದ ಗಣೇಶ ಮೂರ್ತಿಗಳು

ವಿವಿಧ ಮಾದರಿಯ 82 ಕಾರುಗಳ ಗೊಂಬೆಗಳು ಹಾಗೂ 42 ವಿಧದ ಗಣೇಶ ಮೂರ್ತಿಗಳು ಸಂಗ್ರಹದಲ್ಲಿವೆ. ಚನ್ನಪಟ್ಟಣದ ಬೊಂಬೆಗಳು, ಮೈಸೂರು ಅರಮನೆ, ಬದರಿನಾಥ, ಕೇದಾರನಾಥ, ಅಯೋಧ್ಯೆಯ ಬಾಲರಾಮ, ಪುರಿ ಜಗನ್ನಾಥನ ಪ್ರತಿಕೃತಿಗಳು ಪ್ರದರ್ಶನದ ವೈವಿಧ್ಯ ಹೆಚ್ಚಿಸಿವೆ. ಈಶ್ವರನ ಅಭಿಷೇಕಕ್ಕೆ ಸಜ್ಜಾಗುವ ಗಣಪತಿಯ ವಾದ್ಯಗೋಷ್ಠಿ ಹಾಗೂ ಹುತ್ತದಲ್ಲಿರುವ ವೆಂಕಟೇಶ್ವರನಿಗೆ ಹಾಲು ನೀಡುವ ಗೋಮಾತೆಯ ದೃಶ್ಯವೂ ವಿಶೇಷವಾಗಿದೆ.

ಗೊಂಬೆಗಳನ್ನು ಕೇವಲ ಸಾಲುಗಳಲ್ಲಿ ಜೋಡಿಸದೆ, ಒಂದಕ್ಕೊಂದು ಹೊಂದುವ ಸನ್ನಿವೇಶಗಳನ್ನು ರೂಪಿಸಿರುವುದು ಪ್ರದರ್ಶನದ ವೈಶಿಷ್ಟ್ಯ. ಪ್ರತಿ ಹಂತದಲ್ಲಿಯೂ ಒಂದು ಕಥೆ ಅಥವಾ ಬದುಕಿನ ಚಿತ್ರಣ ಕಾಣಸಿಗುತ್ತದೆ.

ಅಜ್ಜಿಯಿಂದ ಮೊಮ್ಮಕ್ಕಳವರೆಗೆ ಮುಂದುವರಿದ ಸಂಪ್ರದಾಯ

ಹಿರಿಯರಾದ ಅಶ್ವತ್ಥಮ್ಮ ಅವರ ಕಾಲದಿಂದ ನಡೆದು ಬಂದಿರುವ ಈ ಆಚರಣೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಪಾಲ್ಗೊಳ್ಳುತ್ತಾರೆ. ಗೊಂಬೆಗಳನ್ನು ಜೋಡಿಸುವುದು, ಅಲಂಕರಿಸುವುದು ಹಾಗೂ ಮನೆಗೆ ಬರುವವರಿಗೆ ಸಿಹಿ ತಿಂಡಿ ನೀಡಿ ಆತಿಥ್ಯ ವಹಿಸುವುದು ಹಬ್ಬದ ಭಾಗವಾಗಿದೆ.

“ನಮ್ಮ ತಲೆಮಾರಿನಿಂದ ಬಂದಿರುವ ಗೊಂಬೆಗಳೊಂದಿಗಿನ ನಂಟು ಮತ್ತು ಪ್ರೀತಿ ಸೊಸೆ ದಿವ್ಯಾ ಹಾಗೂ ಮೊಮ್ಮಕ್ಕಳಾದ ಕುಶಲ ಮತ್ತು ಚಿರಾಗ್ ಅವರಿಗೂ ಮುಂದುವರಿದಿರುವುದು ಸಂತಸ ತಂದಿದೆ. ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಗೊಂಬೆಗಳನ್ನು ಜೋಡಿಸಿಟ್ಟು, ಮನೆಗೆ ಬಂದವರಿಗೆ ಹಬ್ಬದ ಸಿಹಿ ತಿಂಡಿ ನೀಡಿ ಆತಿಥ್ಯ ವಹಿಸುತ್ತಾರೆ” ಎಂದು ಅಶ್ವತ್ಥಮ್ಮ ಹೇಳಿದರು.

“ನಮ್ಮ ಅಜ್ಜಿ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನು ನಮಗೆ ಕಲಿಸಿಕೊಟ್ಟರು. ಈಗ ಮಕ್ಕಳು ಕೂಡ ಆಸಕ್ತಿಯಿಂದ ಕೈಜೋಡಿಸುತ್ತಾರೆ. ಎಲ್ಲರೂ ಸೇರಿ ಗೊಂಬೆಗಳನ್ನು ಜೋಡಿಸುವ ಕ್ಷಣಗಳು ಸದಾ ನೆನಪಿನಲ್ಲಿ ಉಳಿಯುತ್ತವೆ” ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್ ತಿಳಿಸಿದರು.

ಕಲೆ, ಸಂಸ್ಕೃತಿಯ ಪರಿಚಯ

ಶರನ್ನವರಾತ್ರಿಯ ಮೊದಲ ದಿನದಿಂದ ಒಂಬತ್ತು ದಿನಗಳ ಕಾಲ ಗೊಂಬೆಗಳನ್ನು ಪ್ರದರ್ಶಿಸಿ ಪೂಜೆ ಸಲ್ಲಿಸಲಾಗುತ್ತದೆ. ಪಾಡ್ಯದಿಂದ ನವಮಿಯವರೆಗೆ ನಡೆಯುವ ಈ ಆಚರಣೆಯ ಮೂಲಕ ಪುರಾಣ, ಇತಿಹಾಸ, ಕಲೆ ಮತ್ತು ಜನಜೀವನವನ್ನು ಪರಿಚಯಿಸುವ ಆಶಯವಿದೆ.

“ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪುರಾಣದ ಪರಿಚಯವನ್ನು ಗೊಂಬೆಗಳ ಮೂಲಕ ಮಾಡಿಕೊಡುವ ಪ್ರಯತ್ನ ನಮ್ಮದು. ಹಿರಿಯರಿಂದ ಬಂದ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕು ಎಂಬ ಉದ್ದೇಶದಿಂದ ಕುಟುಂಬದವರೆಲ್ಲರೂ ಸೇರಿ ಹಬ್ಬ ಆಚರಿಸುತ್ತೇವೆ” ಎಂದು ಗೃಹಿಣಿ ದಿವ್ಯಾ ತಿಳಿಸಿದರು.

ಮೇಲೂರಿನ ಈ ಗೊಂಬೆ ಹಬ್ಬವು ಮಣ್ಣಿನ ಮೂರ್ತಿಗಳ ಪ್ರದರ್ಶನಕ್ಕೆ ಸೀಮಿತವಾಗದೆ, ಪುರಾಣದ ಕಥೆಗಳನ್ನು ನೆನಪಿಸುವ, ಜನಪದ ಬದುಕನ್ನು ಪರಿಚಯಿಸುವ ಮತ್ತು ತಲೆಮಾರುಗಳನ್ನು ಬೆಸೆಯುವ ಸಾಂಸ್ಕೃತಿಕ ಪರಂಪರೆಯಾಗಿ ರೂಪುಗೊಂಡಿದೆ.

In English: At the home of M.K. Ravi Prasad, a gram panchayat member at Melur in Sidlaghatta taluk, a three-generation Dasara ‘Gombe Habba’ (doll display) shows scenes from the Ramayana and Krishna stories, village life, 82 car models, 42 types of Ganesha idols and replicas of Mysuru Palace, Badrinath, Kedarnath, Ayodhya’s Bala Rama and Puri Jagannath. The display, inspired by the Mysuru Palace tradition, is arranged for nine days from Padya to Navami of Sharannavaratri, continuing a practice begun by elder Ashwatthamma and now joined by daughter-in-law Divya and grandchildren Kushal and Chirag.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -