Sidlaghatta, Chikkaballapur : ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಖುರ್ಚಿ ಕಿತ್ತಾಟ’ದಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಜನರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಗಂಭೀರವಾಗಿ ಆರೋಪಿಸಿದರು.
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಮತ್ತು ಆಡಳಿತ ವೈಫಲ್ಯವನ್ನು ಖಂಡಿಸಿ, ಬಿಜೆಪಿ ರೈತ ಮೋರ್ಚಾ ಹಾಗೂ ವಿವಿಧ ಘಟಕಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮತ್ತು ಮನವಿ ಸಲ್ಲಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಸಿಎಂ ಮತ್ತು ಡಿಸಿಎಂ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಇದರಿಂದಾಗಿ ರಾಜ್ಯದ ರೈತರ ಮತ್ತು ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸಲು ಸರ್ಕಾರಕ್ಕೆ ಪುರಸೊತ್ತೂ ಇಲ್ಲ, ವ್ಯವಧಾನವೂ ಇಲ್ಲದಂತಾಗಿದೆ” ಎಂದು ರಾಮಚಂದ್ರಗೌಡ ದೂರಿದರು. ಮುಖ್ಯಮಂತ್ರಿಗಳ ನಿವಾಸದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಂಡಿ ಮತ್ತು ಡಿಸಿಎಂ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೋಳಿ ಮಾಂಸ ಸೇವಿಸುವುದರಲ್ಲಿ ತಲ್ಲೀನರಾಗಿದ್ದು, ರಾಜ್ಯದ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುವಂತಹ ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.
ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಇದೀಗ ರೈತರನ್ನು ಸಂಪೂರ್ಣವಾಗಿ ಮರೆತಿದೆ. ಕೇಂದ್ರ ಸರ್ಕಾರವು ಬೆಂಬಲ ಬೆಲೆ ಘೋಷಿಸಿದ್ದರೂ, ರಾಜ್ಯ ಸರ್ಕಾರವು ಮೆಕ್ಕೆ ಜೋಳದ ಖರೀದಿ ಕೇಂದ್ರಗಳನ್ನು ಈವರೆಗೂ ಆರಂಭಿಸಿಲ್ಲ. ರಾಜ್ಯ ಸರ್ಕಾರವು “ಕಿವಿ ಕೇಳಿಸದ, ಮಾತನಾಡಲು ಬಾರದ” ಸರ್ಕಾರದಂತೆ ವರ್ತಿಸುತ್ತಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ನೆರೆ ಸಂತ್ರಸ್ತರ ಪರಿಹಾರ ಮೊತ್ತವನ್ನು 5 ಲಕ್ಷದಿಂದ 1 ಲಕ್ಷಕ್ಕೆ ಕಡಿತಗೊಳಿಸಿರುವುದನ್ನು ಮತ್ತು ಜಂಗಮಕೋಟೆ ಹೋಬಳಿಯ ರೈತರ ಕೃಷಿ ಜಮೀನುಗಳನ್ನು ಕೆಐಡಿಬಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು ಎಂದು ಬಿಜೆಪಿ ಒತ್ತಾಯಿಸಿತು. ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ತಹಶೀಲ್ದಾರ್ ಎನ್. ಗಗನ ಸಿಂಧು ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ, ಬಿಜೆಪಿ ಸೇವಾ ಸೌಧ ಕಚೇರಿಯಿಂದ ತಾಲ್ಲೂಕು ಕಚೇರಿಯವರೆಗೆ ಎತ್ತಿನ ಬಂಡಿಯಲ್ಲಿ ಆಗಮಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೃಹತ್ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಎಂ. ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ವಿ. ರಾಜಶೇಖರ ಸೇರಿದಂತೆ ಹಲವು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
