Sidlaghatta, chikkaballapur : ಏಡ್ಸ್ (AIDS) ಒಂದು ಗಂಭೀರ ಕಾಯಿಲೆಯಾಗಿದ್ದರೂ, ಸಕಾಲಕ್ಕೆ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಂಡರೆ ಸಾಮಾನ್ಯ ಜನರಂತೆ ಸಹಜ ಜೀವನವನ್ನು ನಡೆಸಲು ಸಾಧ್ಯವಿದೆ ಎಂದು ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ತಿಳಿಸಿದರು.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ವೈದ್ಯಕೀಯ ಪ್ರಗತಿಯಿಂದಾಗಿ ಏಡ್ಸ್ ರೋಗವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಆದಾಗ್ಯೂ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಸೂಕ್ತ. ಏಡ್ಸ್ ಪೀಡಿತ ವ್ಯಕ್ತಿಗಳನ್ನು ನಾವು ಸಮಾಜದ ಅವಿಭಾಜ್ಯ ಅಂಗವಾಗಿ ನೋಡಬೇಕು ಮತ್ತು ಅವರನ್ನು ಯಾವುದೇ ಕಾರಣಕ್ಕೂ ಪ್ರತ್ಯೇಕಿಸಬಾರದು ಎಂದು ಅವರು ಹೇಳಿದರು.
ಈ ಕಾರ್ಯಕ್ರಮವನ್ನು ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಐಸಿಟಿಸಿ ಘಟಕ, ಸಾರ್ವಜನಿಕ ಆಸ್ಪತ್ರೆ, ಸೌಖ್ಯ ಸಂಜೀವಿನಿ ಸಂಸ್ಥೆ, ನಿಸರ್ಗ ಸೊಸೈಟಿ ಮತ್ತು ಶೂರ್ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸಲು ತಾಲ್ಲೂಕು ಮಟ್ಟದಲ್ಲಿ ಬೀದಿ ನಾಟಕದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್. ಗಗನ ಸಿಂಧು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಸಿಡಿಪಿಒ ವಿದ್ಯಾ ವಸ್ತ್ರದ್, ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಮತ್ತು ಸರ್ಕಾರಿ ಸಹಾಯಕ ಅಭಿಯೋಜಕ ಮೊಹಮ್ಮದ್ ಖಾಜಾ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
