
Sidlaghatta : ಕಟ್ಟಡ ಮತ್ತು ಇತರೆ ನಿರ್ಮಾಣ ವಲಯದಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ಸರ್ಕಾರವು ಕಾರ್ಮಿಕ ಇಲಾಖೆ, ಕಾರ್ಮಿಕ ಮಂಡಳಿಯಿಂದ ಅನೇಕ ರೀತಿಯ ಸವಲತ್ತುಗಳನ್ನು ನೀಡಲಿದೆ. ಆದರೆ ಸಾಕಷ್ಟು ಮಂದಿಗೆ ಈ ಬಗ್ಗೆ ಅರಿವು ಇಲ್ಲದೆ ಸವಲತ್ತುಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಸ್.ಸುಕನ್ಯ ತಿಳಿಸಿದರು.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಡಳಿಯಲ್ಲಿ ನೋಂದಾಯಿಸಿಕೊಂಡ ಕಟ್ಟಡ ಇನ್ನಿತರೆ ನಿರ್ಮಾಣ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಟೂಲ್ ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ಮದುವೆಗೆ ಸಹಾಯಹ ಧನ ಸೇರಿದಂತೆ ಅನೇಕ ರೀತಿಯ ಸವಲತ್ತುಗಳು ಇವೆ.
ಇವೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಟ್ಟಡ ಇನ್ನಿತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರಬೇಕು ಮತ್ತು ಮಂಡಳಿಯನ್ನು ಹೆಸರನ್ನು ನೋಂದಾಯಿಸಿಕೊಂಡಿರಬೇಕು ಎಂದು ಹೇಳಿದರು.
ಕಾರ್ಮಿಕ ಇಲಾಖೆಯಿಂದ ಮಂಡಳಿಯಲ್ಲಿ ನೋಂದಾಯಿತಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಲಾಯಿತು. ಸರ್ಕಾರಿ ಸಹಾಯಕ ಅಭಿಯೋಜಕಿ ರೂಪ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ವಕೀಲರಾದ ರಘುಗೌಡ, ರಾಮಕೃಷ್ಣ, ಕಾರ್ಮಿಕ ಇಲಾಖೆಯ ನವೀನ್ ಕುಮಾರ್ ಹಾಜರಿದ್ದರು.