
Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯ (Dolphin Public School) ಸುಮಾರು ನೂರು ವಿದ್ಯಾರ್ಥಿಗಳ ಸೈಕಲ್ ಜಾಥಾ (Bicycle Rally) ಮತ್ತು ತಾಲ್ಲೂಕು ಕಚೇರಿಯ ಮುಂದೆ ವಿದ್ಯಾರ್ಥಿಗಳ ಬೀದಿ ನಾಟಕದ ಮೂಲಕ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್ ಅವರು ಮಾತನಾಡಿದರು.
ಪರಿಸರದ ಕುರಿತ ಕಳಕಳಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದುದು ಇಂದಿನ ಅಗತ್ಯಗಳಲ್ಲೊಂದು. ಸಸ್ಯ ಪ್ರೀತಿಯನ್ನು ಜನಮಾನಸದಲ್ಲಿ ಬಿತ್ತಿ ಬೆಳೆಸುವ ನಿಟ್ಟಿನಲ್ಲಿ ಪ್ರೇರಣೆ ನೀಡುವ ಕೆಲಸ ಮಾಡುವ ಅಗತ್ಯ ಬಹಳಷ್ಟಿದೆ.
ಪರಿಸರದ ಸ್ವಚ್ಛತೆ ಕೂಡ ಅಷ್ಟೇ ಅಗತ್ಯದ್ದಾಗಿರುವುದರಿಂದ ಈ ಬಗ್ಗೆ ಯುವ ಪಡೆ ಬೀದಿ ನಾಟಕದಲ್ಲಿ ಸಾರಿ ಹೇಳುತ್ತಿದ್ದಾರೆ. ಮಳೆಗಾಲ ಆರಂಭವಾಗುತ್ತಿದೆ, ಆರೋಗ್ಯ ಕಾಳಜಿಯಿಂದಲೂ ಪರಿಸರ ಚೊಕ್ಕವಾಗಿಟ್ಟುಕೊಳ್ಳಿ ಎನ್ನುವ ಸಂದೇಶ ನೀಡುತ್ತಿದ್ದಾರೆ. ಮರಗಿಡಗಳನ್ನು ನೆಟ್ಟು ಪೋಷಿಸಬೇಕಾದ ಅಗತ್ಯವನ್ನು ಮಕ್ಕಳಿಗೆ ಮನಗಾಣಿಸಿ ಅವರಿಂದ ಜನಸಮುದಾಯಕ್ಕೂ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
“ವಾಹನಗಳ ಮಿತ ಬಳಕೆ ವಾಯು ಮಂಡಲ ಸುರಕ್ಷಿತ” “ನಮ್ಮ ನಡೆ ವನ್ಯಜೀವಿ ಸಂರಕ್ಷಣೆ ಕಡೆ” ಮುಂತಾದ ಫಲಕಗಳನ್ನು ಸೈಕಲ್ ಮುಂದೆ ನೇತು ಹಾಕಿ ಸಂಚರಿಸುವ ಮೂಲಕ ಅರಿವು ಮೂಡಿಸಲು ವಿದ್ಯಾರ್ಥಿಗಳು ಶ್ರಮಿಸಿದರು. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಪ್ರಾಂಶುಪಾಲೆ ನೂರ್ ಜಹಾನ್, ಉಪಪ್ರಾಂಶುಪಾಲ ನಾಗೇಶ್, ಉಪನ್ಯಾಸಕರಾದ ಖದೀರ್, ಸಂಪತ್ ಹಾಜರಿದ್ದರು.