
Ganjigunte, Sidlaghatta : ಹಕ್ಕಿ ಪಿಕ್ಕಿ ಜನಾಂಗದವರು ವ್ಯಾಪಾರಕ್ಕೆಂದು ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲೆ ಇರುತ್ತಾರೆ. ವರ್ಷಕ್ಕೊಮ್ಮೆ ಊರಿಗೆ ಬಂದು ನೆಲೆಸುತ್ತಾರೆ. ಕುಟುಂಬದ ಹಿರಿಯರು ಬದುಕಿಗಾಗಿ ಹೊರಗೆ ಇದ್ದಾಗ ಮಕ್ಕಳು ಮಾತ್ರ ಇಲ್ಲಿರುತ್ತಾರೆ. ಇಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಹೊಣೆ ನಮ್ಮದಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯ ಬಾಳೇಗೌಡನಹಳ್ಳಿ ಹಾಗೂ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ ತಲಾ ಒಂದು ಕೋಟಿ ರೂ.ವೆಚ್ಚದ ವಾಲ್ಮೀಕಿ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಕ್ಕಿ ಪಿಕ್ಕಿ ಸಮುದಾಯದವರೆ ನೆಲೆಸಿರುವ ಈ ಗ್ರಾಮದಲ್ಲಿ ನಾನು ಒಮ್ಮೆ ಮದುವೆ ಕಾರ್ಯಕ್ರಮಕ್ಕೆ ಬಂದಾಗ ಪೆಂಡಾಲ್ ಹಾಕಿ ಮದುವೆ ಕಾರ್ಯ ಮಾಡಿದ್ದರು. ಆ ದಿನ ನನಗೆ ಇಲ್ಲಿ ಮದುವೆ ಇನ್ನಿತರೆ ಶುಭ ಸಮಾರಂಭ ನೆರವೇರಿಸಲು ಅನುಕೂಲ ಆಗುವಂತ ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ಮನಸಿಗೆ ಬಂತು.
ಅದರಂತೆ ಮುಖ್ಯಮಂತ್ರಿಗಳು ವಿರೋಧ ಪಕ್ಷದ ಶಾಸಕರಿಗೆ ನೀಡಿದ 25 ಕೋಟಿ ರೂ.ವಿಶೇಷ ಅನುದಾನದಲ್ಲಿ ಬಾಳೇಗೌಡನಹಳ್ಳಿ ಹಾಗೂ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ತಲಾ 50 ಲಕ್ಷ ರೂ.ನೀಡಿದ್ದೇನೆ. ಆದರೆ ಅಷ್ಟು ಹಣದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಕಷ್ಟ.
ಹಾಗಾಗಿ ಇನ್ನೂ ಒಂದು ಕೋಟಿ ಅನುದಾನವನ್ನು ನಾನು ಒದಗಿಸಲಿದ್ದು ತಲಾ ಒಂದು ಕೋಟಿ ರೂ.ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದರು.
ಜತೆಗೆ ನಾನು ಬಾಳೇಗೌಡನಹಳ್ಳಿಗೆ ಹೋದಾಗ ಗ್ರಾಮಸ್ಥರು ಕುಡಿಯುವ ನೀರು, ರಸ್ತೆಯ ಸಮಸ್ಯೆಯನ್ನು ಮುಂದಿಟ್ಟು ಸರಿಪಡಿಸುವಂತೆ ಮನವಿ ಮಾಡಿದ್ದು, ಅದರಂತೆ ನಾನು ಪ್ರಾಮಾಣಿಕವಾಗಿ ಆ ಎರಡೂ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ನಾನು ಶಾಸಕನಾದ ಮೇಲೆ ಈ ಕ್ಷೇತ್ರದಲ್ಲಿನ ಜಂಗಮಕೋಟೆ, ಕಸಬಾ ಹೋಬಳಿಗಿಂತಲೂ ಈ ಹೋಬಳಿಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ್ದೇನೆ. ಈ ಭಾಗವು ಎಲ್ಲ ಕ್ಷೇತ್ರಗಳಲ್ಲೂ ತೀರಾ ಹಿಂದುಳಿದಿದ್ದು ಇಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಗಂಜಿಗುಂಟೆ ನರಸಿಂಹಮೂರ್ತಿ, ತಾದೂರು ರಘು, ರಾಂಬಾಬು, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ಹಾಜರಿದ್ದರು.