
Ganjigunte, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ವೃತ್ತದಲ್ಲಿನ ಅಂಗಡಿಯೊಂದರ ಬಳಿ ಕಾಫಿ ಕುಡಿಯಲೆಂದು ಸ್ನೇಹಿತರ ಜತೆ ಕುಳಿತಿದ್ದ ಕಾಂಗ್ರೆಸ್ ಮುಖಂಡನ ಮೇಲೆ ಜೆಡಿಎಸ್ ಕಾರ್ಯಕರ್ತರ ಗುಂಪೊಂದು ಏಕಾ ಏಕಿ ದಾಳಿ ನಡೆಸಿ ಪೊರಕೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ನಮ್ಮ ಜಾತಿಯನ್ನು ಬಯ್ಯುತ್ತೀಯಾ ಎಂದು ಮಹಿಳೆಯೊಬ್ಬಳು ಕೈಯ್ಯಲ್ಲಿ ಪೊರಕೆ ಹಿಡಿದು ಬಂದು ಕಾಂಗ್ರೆಸ್ ಮುಖಂಡ ವಸಂತಾಚಾರಿ ಅವರ ಮೇಲೆ ಪೊರಕೆಯಿಂದಲೆ ಹಲ್ಲೆ ನಡೆಸಿದಳು. ಜತೆಗೆ ಮಹಿಳೆಯ ಜತೆಯಲ್ಲಿ ಆಗಮಿಸಿದ ಇನ್ನು ಕೆಲವರು ವಸಂತಾಚಾರಿಯ ಶರ್ಟ್ ನ ಕಾಲರ್ ಹಿಡಿದು ಎಳೆದಾಡಿದ್ದಾರೆ.
ಹಿಡೀರಿ ಹೊಡೀರಿ, ಏಯ್ ಬಿಡಬೇಡ ಎನ್ನುವ, ಹಲ್ಲೆ ನಡೆಸುವ ದೃಶ್ಯವನ್ನು ಕಾಫಿ ಟೀ ಅಂಗಡಿಯ ಬಳಿ ಇದ್ದವರು ಸೆರೆ ಹಿಡಿದಿದ್ದು ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಪೊರಕೆಯಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಹಲ್ಲೆಗೆ ಒಳಗಾದ ಕಾಂಗ್ರೆಸ್ ಮುಖಂಡ ವಸಂತಾಚಾರಿ ಮತ್ತು ಹಲ್ಲೆ ನಡೆಸಿತು ಎನ್ನಲಾದ ಗುಂಪಿನ ಪರವಾಗಿ ಜಿ.ನರಸಿಂಹಮೂರ್ತಿ ಇಬ್ಬರೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಸಂತಾಚಾರಿ ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದು ವಾಲ್ಮೀಕಿ ಭವನದ ಕಟ್ಟಡಕ್ಕೆ ಗುರ್ತಿಸಿದ ಜಾಗದ ಬಗ್ಗೆ ತಕರಾರು ತೆಗೆದಿದ್ದಕ್ಕೆ ಜೆಡಿಎಸ್ ಮುಖಂಡ ಜಿ.ನರಸಿಂಹಮೂರ್ತಿಯ ಕಡೆಯವರು ನನ್ನ ಮೇಲೆ ಪೊರಕೆ, ದೊಣ್ಣೆಯಿಂದ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದಾರೆ.
ನರಸಿಂಹಮೂರ್ತಿ ಕೂಡ ವಸಂತಾಚಾರಿ ವಿರುದ್ದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದಿಬ್ಬೂರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಎರಡೂ ಕಡೆಯ ದೂರನ್ನು ಸ್ವೀಕರಿಸಿದ್ದಾರೆ.
ಘಟನೆಯ ವಿವರ :
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯ ಹಕ್ಕಿಪಿಕ್ಕಿ ಕಾಲೋನಿ ಮತ್ತು ಬಾಳೇಗೌಡನಹಳ್ಳಿಯಲ್ಲಿ ಬುಧವಾರವಷ್ಟೆ ತಲಾ ಒಂದು ಕೋಟಿ ರೂ.ವೆಚ್ಚದಲ್ಲಿ ವಾಲ್ಮೀಕಿ ಭವನ ಕಟ್ಟಡ ನಿರ್ಮಾಣಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಅವರು ಭೂಮಿ ಪೂಜೆ ನೆರವೇರಿಸಿದ್ದರು.
ಈ ವೇಳೆ ಜೆಡಿಎಸ್ ಮುಖಂಡ ಜಿ.ನರಸಿಂಹಮೂರ್ತಿ ಅವರು ಸಮಾಜ ಸೇವೆ ನೆಪದಲ್ಲಿ ಬಲ್ಪ್, ತರಕಾರಿ, ದಿನಸಿ ಕಿಟ್ ನೀಡುವವರನ್ನು ಸಮಾಜ ಘಾತುಕರು, ಅವರನ್ನು ನಂಬಬೇಡಿ ಎಂದು ಹೆಸರು ಹೇಳದೆ ಪುಟ್ಟು ಆಂಜಿನಪ್ಪ ಮತ್ತು ರಾಜೀವ್ ಗೌಡ ಅವರನ್ನು ಸಮಾಜಘಾತುಕರು ಎಂದು ಟೀಕಿಸಿದ್ದರು.
ಇದಾದ ನಂತರ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ವಾಲ್ಮೀಕಿ ಭವನ ಕಟ್ಟಡಕ್ಕೆ ಗುರ್ತಿಸಿದ ಜಾಗಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಅವರ ಬೆಂಬಲಿಗ ಗಂಜಿಗುಂಟೆ ಗ್ರಾಮದ ವಸಂತಾಚಾರಿ, ಇದು ಬಡವರು ಅನುಭವದಲ್ಲಿರುವ ಜಾಗವಾಗಿದ್ದು ಇದು ಬಿಟ್ಟು ಬೇರೆ ಕಡೆ ವಾಲ್ಮೀಕಿ ಭವನ ಕಟ್ಟಿಕೊಳ್ಳಿ ಎಂದು ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಹಲವರ ಬಳಿ ತಕರಾರು ತೆಗೆದಿದ್ದರು.
ಇದೇ ಈ ಗಲಾಟೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದ್ದು ವಾಲ್ಮೀಕಿ ಭವನ ಕಟ್ಟಡದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡ ಆ ಭಾಗದ ಜೆಡಿಎಸ್ ಮುಖಂಡ ಜಿ.ನರಸಿಂಹಮೂರ್ತಿ ಕಡೆಯವರು ವಸಂತಾಚಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.