Home News ಜುಲೈ 6ರಂದು ಧರಣಿ: ದಲಿತ ಸಂಘರ್ಷ ಸಮಿತಿ ಪ್ರಕಟಣೆ

ಜುಲೈ 6ರಂದು ಧರಣಿ: ದಲಿತ ಸಂಘರ್ಷ ಸಮಿತಿ ಪ್ರಕಟಣೆ

0
Sidlaghatta Dalit Sangharsh Samiti Press Conference July 6 Protest Announcement

Sidlaghatta : ಶಿಡ್ಲಘಟ್ಟ ತಾಲ್ಲೂಕು ಆಡಳಿತದ ದಲಿತ ವಿರೋಧಿ ಧೋರಣೆ, ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್‌.ಎಸ್) ತಾಲ್ಲೂಕು ಘಟಕದ ವತಿಯಿಂದ ಜುಲೈ 6ರಂದು ತಾಲ್ಲೂಕು ಕಚೇರಿ ಎದುರು ಒಂದು ದಿನದ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಸಂವಿಧಾನಬದ್ಧ ಹಕ್ಕುಗಳು ಹಾಗೂ ಮೀಸಲಾತಿ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಶೇ.36ರಷ್ಟು ಎಸ್‌.ಸಿ–ಎಸ್‌.ಟಿ ಜನಸಂಖ್ಯೆ ಇದ್ದರೂ ರಾಜಕೀಯ ಪಕ್ಷಗಳು ಅವರನ್ನು ಮತ ಬ್ಯಾಂಕ್ ನಂತೆ ಬಳಸಿಕೊಳ್ಳುತ್ತಿವೆ. ಎಸ್‌.ಸಿ.ಪಿ ಹಾಗೂ ಟಿ.ಎಸ್‌.ಪಿ ಯೋಜನೆಗಳ ಅನುದಾನವನ್ನು ಮೂಲ ಉದ್ದೇಶಗಳಿಗೆ ಬಳಸದೆ ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡುತ್ತಿರುವುದರಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ನಿವೇಶನ, ಮನೆ, ಕೃಷಿ ಭೂಮಿ ಮತ್ತು ಸ್ಮಶಾನದಂತಹ ಮೂಲಭೂತ ಸೌಲಭ್ಯಗಳಿಗಾಗಿ ದಲಿತರು ಇನ್ನೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಫಾರಂ ಸಂಖ್ಯೆ 50, 53 ಹಾಗೂ 57ರಡಿ ಸಲ್ಲಿಕೆಯಾಗಿರುವ ಸಾವಿರಾರು ಬಗರ್ ಹುಕುಂ ಅರ್ಜಿಗಳು ವರ್ಷಗಳಿಂದ ಬಾಕಿ ಉಳಿದಿದ್ದು, ದರಖಾಸ್ತು ಸಮಿತಿ ರಚನೆಯಾಗದ ಕಾರಣ ಭೂ ಮಂಜೂರಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಹೇಳಿದರು.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ದೊರೆಯುತ್ತಿಲ್ಲ. ದೂರುದಾರರ ಮೇಲೆಯೇ ಪ್ರತಿದೂರು ದಾಖಲಿಸುವ ಪ್ರವೃತ್ತಿ ಹೆಚ್ಚಾಗಿದೆ. ತಹಶೀಲ್ದಾರ್ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರೂ ಕಳೆದ ಒಂದು ವರ್ಷದಿಂದ ದಲಿತರ ಸಮಸ್ಯೆಗಳ ಕುರಿತು ಯಾವುದೇ ಸಭೆ ನಡೆಸಿಲ್ಲ ಎಂದು ಟೀಕಿಸಿದರು.

ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಾರ್ವಜನಿಕರು ಸಣ್ಣ ಕೆಲಸಗಳಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಸಗೀಕರಣ ನೀತಿಯಿಂದ ವಿದ್ಯಾವಂತ ದಲಿತ ಯುವಕರು ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ದಲಿತ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ದಲಿತರಿಗೆ ಸಮರ್ಪಕ ರಕ್ಷಣೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ತೋಕಲಹಳ್ಳಿ ಗ್ರಾಮದ ಸರ್ವೆ ನಂ.1ರಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸುವುದು, ಬಾಕಿ ಇರುವ ಬಗರ್ ಹುಕುಂ ಅರ್ಜಿಗಳನ್ನು ಇತ್ಯರ್ಥಪಡಿಸುವುದು, ತಾಲ್ಲೂಕು ದರಖಾಸ್ತು ಸಮಿತಿ ರಚಿಸುವುದು, ದಲಿತರಿಗೆ ನಿವೇಶನ, ಮನೆ ಹಾಗೂ ಸ್ಮಶಾನ ಭೂಮಿ ಒದಗಿಸುವುದು, ಗ್ರಾಮ ಪಂಚಾಯಿತಿಗಳಲ್ಲಿ ಶೇ.22.5 ಮೀಸಲಾತಿ ಅನುದಾನದ ದುರುಪಯೋಗ ಕುರಿತು ತನಿಖೆ ನಡೆಸುವುದು, ಎಸ್‌.ಸಿ.ಪಿ–ಟಿ.ಎಸ್‌.ಪಿ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಮಾತ್ರ ಬಳಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಧಡಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಎ.ಎಲ್. ನಾರಾಯಣಸ್ವಾಮಿ, ತಾಲ್ಲೂಕು ಸಂಘಟನಾ ಸಂಚಾಲಕ ಯಣ್ಣಂಗೂರು ಸುಬ್ರಮಣಿ, ದಿಬ್ಬೂರಹಳ್ಳಿ ಚಿಕ್ಕನರಸಿಂಹಯ್ಯ, ದಬರಗಾನಹಳ್ಳಿ ರಾಜಪ್ಪ, ಕೆ.ಎಂ. ನಾರಾಯಣಸ್ವಾಮಿ, ಹೇಮಾರ್ಲಹಳ್ಳಿ ಮುನಿಯಪ್ಪ, ಜಿ. ಕುರುಬರಹಳ್ಳಿ ವೆಂಕಟಸ್ವಾಮಿ ಹಾಜರಿದ್ದರು.

In English: The Karnataka Dalit Sangharsh Samiti’s Sidlaghatta taluk unit has announced a one-day protest on July 6 in front of the taluk office, alleging an anti-Dalit attitude, corruption, and administrative failures. At a press conference, district convener Meloor Manjunath said SC/ST welfare fund allocations are being diverted from their intended purpose and thousands of land-grant applications remain pending for years. The Samiti has demanded a taluk-level grievance committee, pending land titles, and proper utilisation of SCP-TSP funds for community development.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version