
Devara Mallur, Sidlaghatta Taluk : ಮಳೆಗಾಲ ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಶಿಡ್ಲಘಟ್ಟ ತಾಲ್ಲೂಕಿನ ದೇವರ ಮಳ್ಳೂರು ಗ್ರಾಮದಲ್ಲಿ ಸುಮಂಗಲಿ ಮಹಿಳೆಯರು ಐದು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದ ಹಿರಿಯರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಯನ್ನು ಮಹಿಳೆಯರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.
ಪೂಜಾ ವಿಧಾನ ಹೇಗೆ?
ಗ್ರಾಮದ ನಡು ರಸ್ತೆಯಲ್ಲಿ ಮಳೆರಾಯನ ಚಿತ್ರದ ರಂಗೋಲಿ ಬಿಡಿಸಿ, ಕಳಸ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಕಳಸದ ಸುತ್ತ ಐದು ರಾಗಿ ರೊಟ್ಟಿಗಳನ್ನು ಇಟ್ಟು, ಸಂಜೆ ಆರಂಭಿಸಿ ರಾತ್ರಿ 10 ಗಂಟೆಯವರೆಗೆ ಮಳೆರಾಯನ ಶೋಭಾನೆ ಪದಗಳನ್ನು ಹಾಡಿ ಮಳೆಗಾಗಿ ಪ್ರಾರ್ಥಿಸಲಾಗುತ್ತದೆ. ಬಳಿಕ ಕಳಸವನ್ನು ಗ್ರಾಮದ ಶ್ರೀ ಮಳ್ಳೂರಾಂಬ ದೇವಿ ಕೆರೆಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಐದು ರೊಟ್ಟಿಗಳ ಪೈಕಿ ಮೂರು ರೊಟ್ಟಿಗಳನ್ನು ಕೆರೆಗೆ ಅರ್ಪಿಸಿ, ಉಳಿದ ಎರಡು ರೊಟ್ಟಿಗಳನ್ನು ಪ್ರಸಾದವಾಗಿ ಸೇವಿಸುವುದು ಇಲ್ಲಿನ ಸಂಪ್ರದಾಯ.
ಮಳೆರಾಯನ ಮೆರವಣಿಗೆ ಮತ್ತು ಕತ್ತೆಗಳ ಮದುವೆ
ಐದು ದಿನಗಳ ಪೂಜಾ ಕೈಂಕರ್ಯ ಪೂರ್ಣಗೊಂಡ ಬಳಿಕ ಗಂಡು ಮಗುವಿಗೆ ಹೆಣ್ಣಿನ ವೇಷ ತೊಡಿಸಿ, ಮಳೆರಾಯನ ಪ್ರತಿರೂಪವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ವೇಷಧಾರಿ ಮಗುವಿನ ಮೇಲೆ ನೀರು ಹಾಕಿ ಪೂಜೆ ಸಲ್ಲಿಸಿದ ಬಳಿಕ ಕೆರೆಯಲ್ಲಿ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮಳೆರಾಯನನ್ನು ಒಲಿಸಿಕೊಳ್ಳುವ ನಂಬಿಕೆಯೊಂದಿಗೆ ಕತ್ತೆಗಳ ಮದುವೆ ಮಾಡಿಸುವ ವಿಶಿಷ್ಟ ಆಚರಣೆಯನ್ನೂ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ನಂತರ ಗ್ರಾಮಸ್ಥರಿಗೆ ಸಿಹಿ ಹಂಚಲಾಗುತ್ತದೆ. ಪೂಜಾ ಕಾರ್ಯಕ್ರಮಗಳಲ್ಲಿ ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ಮಳೆರಾಯನ ಪೂಜೆಯ ವೈಶಿಷ್ಟ್ಯ
ಅವಿಭಜಿತ ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಬಾರದ ಸಂದರ್ಭದಲ್ಲಿ ಮಳೆರಾಯನನ್ನು ಪೂಜಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಡ್ಡೆ ಹುಡುಗರು ಜೇಡಿ ಮಣ್ಣಿನಿಂದ ಮಳೆರಾಯನ ಗೊಂಬೆ ತಯಾರಿಸಿ, ಅದನ್ನು ಹಲಗೆಯ ಮೇಲಿಟ್ಟು ಹುಡುಗನ ತಲೆಯ ಮೇಲೆ ಹೊತ್ತುಕೊಂಡು ಸಂಜೆ ವೇಳೆ ಮನೆ ಮನೆಗೆ ತೆರಳಿ ಮಳೆರಾಯನ ಹಾಡುಗಳನ್ನು ಹಾಡುತ್ತಾರೆ. ಮನೆಯವರು ರಾಗಿ, ಅಕ್ಕಿ, ಹಣವನ್ನು ಕಾಣಿಕೆಯಾಗಿ ನೀಡಿ, ಗೊಂಬೆ ಹೊತ್ತ ಹುಡುಗನ ಮೇಲೆ ತಣ್ಣೀರು ಸುರಿಸುವುದು ಈ ಆಚರಣೆಯ ವಿಶೇಷ.
ಐದು ಅಥವಾ ಒಂಬತ್ತು ದಿನಗಳ ಕಾಲ ನಡೆಯುವ ಈ ಆಚರಣೆಯ ಕೊನೆಯ ದಿನ ಊರಿನವರೆಲ್ಲ ಕೆರೆಯ ಬಳಿ ಸೇರಿ ಅಡುಗೆ ಮಾಡಿ ಸಾಮೂಹಿಕವಾಗಿ ಊಟ ಮಾಡಿ, ಹಾಡುಗಳನ್ನು ಹಾಡಿ ಆಚರಣೆ ಮುಕ್ತಾಯಗೊಳಿಸುತ್ತಾರೆ. “ಬಾರೊ ಬಾರೊ ಮಳೆರಾಯ, ಬಾಳೆ ತೋಟೆ ನೀರಿಲ್ಲ; ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟೆ ನೀರಿಲ್ಲ” ಎಂದು ಹಾಡುತ್ತಾ ಮಳೆಗಾಗಿ ಪ್ರಾರ್ಥಿಸುವುದು ಈ ಜನಪದ ಆಚರಣೆಯ ಪ್ರಮುಖ ಭಾಗ. ಮಳೆರಾಯನನ್ನು ಆರಾಧಿಸುವ ಇಂತಹ ಆಚರಣೆಗಳು ವೈಜ್ಞಾನಿಕವಾಗಿ ಮಳೆಯನ್ನು ತರಿಸುವುದಕ್ಕೆ ಕಾರಣವಾಗದಿದ್ದರೂ, ಮಳೆ ಮತ್ತು ಕೃಷಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಗ್ರಾಮೀಣ ಜನರ ನಂಬಿಕೆ ಹಾಗೂ ಜನಪದ ಸಂಸ್ಕೃತಿಯ ಪ್ರತೀಕವಾಗಿ ಇಂದಿಗೂ ಮುಂದುವರಿದಿವೆ.
In English: With the monsoon underway but rainfall below expectations, married women in Devara Mallur village performed five days of special prayers for rain, an old village tradition — decorating a kalasha with ragi rotis, singing rain-invoking folk songs each evening, then immersing it at the village’s Mallurambha Devi lake. The ritual concludes with a procession of a boy dressed as the rain deity and the village’s distinctive “donkey wedding” custom, believed to please the rain god.
ಇದೇ ಮಾದರಿಯ ಮೇಲೂರಿನಲ್ಲಿ ನಡೆದ ಕತ್ತೆಗಳ ಮದುವೆ ಸಂಪ್ರದಾಯದ ವರದಿಯನ್ನೂ ನೋಡಿ.