Home News ರೈತರ ಜಮೀನು ಕಿತ್ತುಕೊಂಡರೆ ರೇಷ್ಮೆ ಗೂಡು ಮಾರುಕಟ್ಟೆ ಸ್ಮಶಾನ: ಭೂಸ್ವಾಧೀನ ವಿರೋಧಿಸಿ ಬೈಕ್ ಜಾಥಾ

ರೈತರ ಜಮೀನು ಕಿತ್ತುಕೊಂಡರೆ ರೇಷ್ಮೆ ಗೂಡು ಮಾರುಕಟ್ಟೆ ಸ್ಮಶಾನ: ಭೂಸ್ವಾಧೀನ ವಿರೋಧಿಸಿ ಬೈಕ್ ಜಾಥಾ

0

Sidlaghatta : ಜಂಗಮಕೋಟೆ ಹೋಬಳಿಯಲ್ಲಿ ₹250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರೇಷ್ಮೆ ಗೂಡು ಮಾರುಕಟ್ಟೆಗಾಗಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ವತಿಯಿಂದ ಸೋಮವಾರ ಜಂಗಮಕೋಟೆಯಿಂದ ಚಿಕ್ಕಬಳ್ಳಾಪುರದವರೆಗೆ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ ಸೇರಿದಂತೆ ಸುಮಾರು 2,000ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಜಾಥಾದಲ್ಲಿ ಮಾತನಾಡಿದ ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾರೆಡ್ಡಿ, “ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ರೈತರ ಬದುಕು ನಾಶವಾಗುತ್ತದೆ. ರೇಷ್ಮೆಗೂಡು ಉತ್ಪಾದಿಸುವ ರೈತರೇ ಇಲ್ಲದಂತಾದರೆ, ಆ ಮಾರುಕಟ್ಟೆ ಸ್ಮಶಾನವಾಗಲಿದೆ” ಎಂದು ಎಚ್ಚರಿಸಿದರು. “ಚಿಂತಾಮಣಿಯ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ದೊಡ್ಡ ಪ್ರಮಾಣದ ಭೂಮಿ ಲಭ್ಯವಿದೆ. ಆ ಪ್ರದೇಶವನ್ನು ಅಭಿವೃದ್ಧಿಪಡಿಸುವ ಬದಲು ಹೊಸದಾಗಿ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ” ಎಂದು ಅವರು ಹೇಳಿದರು.

ರೈತರ ಬೇಡಿಕೆ ಏನು?

“ಕೈಗಾರಿಕೆಗಳ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಗೆ ನಮ್ಮ ವಿರೋಧವಿಲ್ಲ. ಆದರೆ ರೈತರ ಬದುಕಿಗೆ ಧಕ್ಕೆಯಾಗುವ ಅಭಿವೃದ್ಧಿಯನ್ನು ಒಪ್ಪಲು ಸಾಧ್ಯವಿಲ್ಲ. ರೈತರು ಸ್ವಯಂಪ್ರೇರಣೆಯಿಂದ ಜಮೀನು ಮಾರಾಟ ಮಾಡಲು ಮುಂದಾದರೆ ವಿರೋಧವಿಲ್ಲ, ಆದರೆ ಒತ್ತಡ ಅಥವಾ ದಬ್ಬಾಳಿಕೆ ಮೂಲಕ ಭೂಸ್ವಾಧೀನ ನಡೆಸಬಾರದು” ಎಂದು ರವಿಕೃಷ್ಣಾರೆಡ್ಡಿ ಹೇಳಿದರು. ಜಂಗಮಕೋಟೆ ಭಾಗದ ಬಹುತೇಕ ರೈತರು ರೇಷ್ಮೆ ಕೃಷಿ, ಹೈನುಗಾರಿಕೆ ಹಾಗೂ ಕೃಷಿಯನ್ನೇ ಅವಲಂಬಿಸಿದ್ದಾರೆ ಎಂದು ಅವರು ತಿಳಿಸಿದರು.

“156 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದ ಅವರು, “ರೈತರ ಶಾಪವೇ ಎಂ.ಸಿ. ಸುಧಾಕರ್ ಅವರಿಗೆ ಮತ್ತೆ ಸಚಿವ ಸ್ಥಾನ ಸಿಗದಿರಲು ಕಾರಣ” ಎಂದು ಆರೋಪಿಸಿದರು.

ಬಲವಂತದ ಭೂಸ್ವಾಧೀನ ಬೇಡ: ರೈತ ಸಂಘ

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, “ವಿಧಾನಸಭೆ ಹಾಗೂ ವಿಧಾನಪರಿಷತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ರೈತರ ಆಕ್ರೋಶವನ್ನು ತಲುಪಿಸಲು ಬೈಕ್ ಜಾಥಾ ಆಯೋಜಿಸಲಾಗಿದೆ” ಎಂದರು. “ಅಧಿವೇಶನದಲ್ಲೇ ಭೂಸ್ವಾಧೀನದ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಭೂಮಿ ನೀಡಲು ಇಷ್ಟವಿಲ್ಲದ ರೈತರಿಂದ ಬಲವಂತವಾಗಿ ಜಮೀನು ಕಸಿದುಕೊಳ್ಳಬಾರದು” ಎಂದು ಆಗ್ರಹಿಸಿದರು.

“ಚನ್ನರಾಯಪಟ್ಟಣ ಭಾಗದ ರೈತರಿಗೆ ನೀಡಿರುವ ನ್ಯಾಯ ಹಾಗೂ ಪರಿಹಾರದ ಮಾದರಿಯನ್ನೇ ಇಲ್ಲಿಯೂ ಅನುಸರಿಸಬೇಕು” ಎಂದು ಬೈರೇಗೌಡ ಒತ್ತಾಯಿಸಿದರು. ಜಂಗಮಕೋಟೆ ಮಾತ್ರವಲ್ಲದೆ ಸರ್ಜಾಪುರ, ಬೈರಮಂಗಲ ಹಾಗೂ ದೊಡ್ಡಬಳ್ಳಾಪುರ ಭಾಗಗಳಲ್ಲೂ ಕೃಷಿ ಭೂಮಿ ಸ್ವಾಧೀನದ ಆತಂಕವಿದೆ ಎಂದು ಅವರು ತಿಳಿಸಿದರು.

ಬೈಕ್ ಜಾಥಾದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಈರೇಬಲ್ಲ ಕೃಷ್ಣಪ್ಪ, ಹಿತ್ತಲಹಳ್ಳಿ ರಮೇಶ್, ಅಜಿತ್ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.

In English: Farmers in Jangamakote hobli, opposing land acquisition for a ₹250 crore silk cocoon market, held a bike rally of roughly 2,000 people from Jangamakote to Chikkaballapur on Monday, backed by the Karnataka Rashtra Samithi (KRS) party. Party founder Ravikrishna Reddy urged the government to use existing industrial land at Chintamani’s Mastenahalli instead of acquiring farmland, and said the 156-day protest would intensify if the government doesn’t respond. Karnataka Rajya Raitha Sangha state working president Byregowda demanded the government follow the compensation model used for Channarayapatna farmers and stop any forced acquisition from unwilling landowners.

ಇದೇ ಹೋರಾಟಕ್ಕೆ ಸಂಬಂಧಿಸಿದ ವಿಜಯೇಂದ್ರ ಬೆಂಬಲ ಕುರಿತ ವರದಿಯನ್ನೂ ನೋಡಿ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version