
Sidlaghatta : ಜೀವನ್ ಜ್ಯೋತಿ ವಿಮಾ ಯೋಜನೆ ಮತ್ತು ಸುರಕ್ಷಾ ವಿಮೆ ಯೋಜನೆ ಬಗ್ಗೆ ನಾಗರಿಕರಲ್ಲಿ ಹೆಚ್ಚು ಜನ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರೊ.ಗೋವಿಂದರಾವ್ ಸಮಿತಿ(ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ)ಯ ಸದಸ್ಯ ಕಾರ್ಯದರ್ಶಿ ಡಾ.ಆರ್.ವಿಶಾಲ್ ಸೂಚಿಸಿದರು.
ನಗರಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕ ಆಸ್ಪತ್ರೆ, ನೆಹರೂ ಕ್ರೀಡಾಂಗಣ, ಹಲವೆಡೆ ಜಲ ಜೀವನ್ ಮಿಷನ್ ನಡಿ ಕಾಮಗಾರಿಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿಡ್ಲಘಟ್ಟವು ಹಿಂದುಳಿದ ತಾಲ್ಲೂಕು ಆಗಿದೆ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇನ್ನೂ ಏನೇನು ಅಭಿವೃದ್ದಿ ಕಾರ್ಯಗಳು ಆಗಬೇಕಿದೆ. ಮುಖ್ಯವಾಗಿ ಏನೇನು ಕೊರತೆಗಳಿವೆ.ಕಳೆದ ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂಬುದರ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿ ಪಡೆದು ಖುದ್ದು ಪರಿಶೀಲಿಸಲು ಬಂದಿರುವುದಾಗಿ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಿಕೊಂಡಿದ್ದು, ನಾಯಿ ಕಡಿತ, ಹಾವು ಕಡಿತಕ್ಕೆ ಚುಚ್ಚು ಮದ್ದು ಸೇರಿದಂತೆ ಔಷಗಳು ಲಭ್ಯವಿವೆ. ವೈದ್ಯರು ಮತ್ತು ಸಿಬ್ಬಂದಿಯ ನೇಮಕಾತಿ ಇನ್ನಷ್ಟು ಆಗಬೇಕಿದೆ. ಸರ್ಕಾರವು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಎಂದು ಆದೇಶಿಸಿದ್ದರೂ ಆಗಿರಲಿಲ್ಲ. ಇತ್ತೀಚೆಗೆ ಆಗಿದೆ ಎಂದರು.
ಹಾಗೆಯೆ ಆರ್ಥಿಕ ಇಲಾಖೆಯಡಿಯಲ್ಲಿ ನಬಾರ್ಡ್ ಮೂಲಕ ನಡೆಯುತ್ತಿರುವ ಆರ್.ಐ.ಡಿ.ಎಫ್ ಯೋಜನೆಗಳು, ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ, ಪಶು ಚಿಕಿತ್ಸಾ ಆಸ್ಪತ್ರೆಯ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಂಗಮಕೋಟೆ ವ್ಯಾಪ್ತಿಯ ಹೊಸಪೇಟೆ ಪಂಚಾಯತ್ ನಲ್ಲಿ ಓವರ್ ಹೆಡ್ ಟ್ಯಾಂಕ್ ನ್ನು ವೀಕ್ಷಿಸಿದೆ. ಜನರಿಗೆ ಈ ಯೋಜನೆಗಳು ಎಷ್ಟು ಪ್ರಯೋಜನಕಾರಿಯಾಗಿವೆ ಎನ್ನುವುದನ್ನು ತಿಳಿಯಲು ಸ್ಥಳ ಪರಿಶೀಲನೆ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮತ್ತು ನಾಗರಿಕರ ಅಭಿಪ್ರಾಯವನ್ನು ಪಡೆಯಲಾಗುವುದು ಎಂದು ಹೇಳಿದರು.
ಮುಖ್ಯವಾಗಿ ಜನಜೀವನ ಮಟ್ಟ ಸುಧಾರಣೆಗಾಗಿ ಸರ್ಕಾರ ಹಾಗೂ ಆಡಳಿತದಿಂದ ಇನ್ನಷ್ಟು ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಜೀವನ್ ಜ್ಯೋತಿ ಭೀಮಾ ಯೋಜನೆ, ಸುರಕ್ಷಾ ಭೀಮಾ ಹಾಗೂ ಆರೋಗ್ಯ ವಿಮೆ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಆಗಬೇಕಿದೆ ಎಂದರು.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಬ್ಯಾಂಕ್ ನವರಿಗೂ ಸೂಚಿಸಿದ್ದು ಮಾಧ್ಯಮದವರು ಕೂಡ ಸಾರ್ವಜನಿಕರ ಹಿತಾಸಕ್ತಿಯಡಿ ಈ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಮಾಡಬೇಕು. ಜನರಿಗೆ ಆರೋಗ್ಯ ವಿಮೆ ಯೋಜನೆ ಉಪಯೋಗ ಸಿಗಬೇಕು. ಇದರಿಂದ ಸಾರ್ವಜನಿಕರಿಗೂ, ವ್ಯವಸ್ಥೆಗೂ ಒಳ್ಳೆಯದು ಎಂದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಮತ್ತು ಅವರ ಜತೆಗಿದ್ದವರನ್ನು, ಕ್ರೀಡಾಂಗಣದಲ್ಲಿ ಕೈಗೊಳ್ಳಬೇಕಾದ ಅಭಿವೃದ್ದಿ, ಮೂಲ ಸೌಕರ್ಯಗಳ ಬಗ್ಗೆ ಅಲ್ಲಿದ್ದ ಕ್ರೀಡಾಪಟುಗಳು, ಸಾರ್ವಜನಿರ ಬಳಿ ಅಭಿಪ್ರಾಯ ಸಂಗ್ರಹಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ತಹಶೀಲ್ದಾರ್ ಗಗನ ಸಿಂಧು, ಪೌರಾಯುಕ್ತೆ ಜಿ.ಅಮೃತ, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಜತೆಗಿದ್ದರು.