
Sidlaghatta : ಈ ನಾಡಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಶ್ರೇಯಸ್ಸು, ಅಭಿವೃದ್ದಿಗೆ ಶ್ರಮಿಸಿದ ಮಹನೀಯರಲ್ಲಿ ಶ್ರೀದೇವರಾಜು ಅರಸು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀದೇವರಾಜು ಅರಸು ಅವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರಾಜು ಅರಸು ಮುಖ್ಯಮಂತ್ರಿ ಆಗಿದ್ದಾಗ ಕೇವಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗಷ್ಟೆ ಹಾಸ್ಟೆಲ್ ಗಳು ಇದ್ದವು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಗೂ ಅವರ ಕುಟುಂಬಗಳ ಆರ್ಥಿಕ, ಸಾಮಾಜಿಕ ಸಮಸ್ಯೆ ಅರಿತು ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳನ್ನು ಆರಂಭಿಸಿದರು. ಇದೀಗ ಲಕ್ಷ ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದ್ದು ಅದರ ಕೀರ್ತಿ ಅರಸು ಅವರಿಗೆ ಸಲ್ಲಬೇಕು ಎಂದರು.
ಇದಲ್ಲದೆ ಅವರು ಜಾರಿಗೆ ತಂದ ಕ್ರಾಂತಿಕಾರಿ ಯೋಜನೆ, ಉಳುವವನೆ ಭೂಮಿಯ ಒಡೆಯ ಭೂ ಕಾಯಿದೆಯಿಂದ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಭೂಮಿ ದೊರೆತು ಅದರಿಂದ ಅವರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಇಂತಹ ಕ್ರಾಂತಿಕಾರಕ ಯೋಜನೆಗಳಿಂದ ಅರಸು ಅವರು ಈ ನಾಡಿನ ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ ಎಂದು ಹೇಳಿದರು.
ದೇವರಾಜು ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು. ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿನ ಎಸ್.ಎಸ್.ಎಲ್.ಸಿ ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ನಿವೃತ್ತ ಶಿಕ್ಷಕ ವಿ.ಕೃಷ್ಣ ಅವರು ದೇವರಾಜು ಅರಸು ಅವರ ಜೀವನ ಚರಿತ್ರೆ ಕುರಿತು ಪ್ರಧಾನ ಭಾಷಣ ಮಾಡಿದರು.
ತಹಶೀಲ್ದಾರ್ ಎನ್.ಗಗನ ಸಿಂಧು, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ಬಿಇಒ ನರೇಂದ್ರ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜ್, ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸುವ ಸಮಿತಿ ಸದಸ್ಯ ಅರಿಕೆರೆ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಬಿ.ನವೀನ್ ಕುಮಾರ್, ವೀಣಾ, ಮುನಿರಾಜು, ವೆಂಕಟೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.