
ಶಿಡ್ಲಘಟ್ಟ ನಗರದ ಜೀವನಾಡಿಗಳಲ್ಲೊಂದಾದ ಗೌಡನ ಕೆರೆ ಮತ್ತೆ ಎಲ್ಲ ರೀತಿಯ ತ್ಯಾಜ್ಯ ಸುರಿಯುವ ತಾಣವಾಗಿ ಮಾರ್ಪಡುತ್ತಿರುವ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ. ಈ ಹಿಂದೆ ಜೈವಿಕ ಮತ್ತು ಆಸ್ಪತ್ರೆ ತ್ಯಾಜ್ಯ ಪತ್ತೆಯಾಗಿದ್ದ ಕೆರೆಯಂಗಳದಲ್ಲೇ ಇದೀಗ ನೂರಾರು ಔಷಧದ ಬಾಟಲಿಗಳು, ಸಿರಪ್‌ಗಳು, ಅವಧಿ ಮೀರಿದ ಔಷಧ ಹಾಗೂ ORS ಪೊಟ್ಟಣಗಳ ರಾಶಿ ಪತ್ತೆಯಾಗಿದೆ.
ಸೋಮವಾರ ಎಂದಿನಂತೆ ಹಸು, ಕುರಿ-ಮೇಕೆಗಳನ್ನು ಮೇಯಿಸಲು ಕೆರೆಯ ಸಮೀಪಕ್ಕೆ ತೆರಳಿದ್ದ ಅನಿಲ್ ಕುಮಾರ್ ಅವರಿಗೆ ಜಾಲಿ ಮರಗಳ ಪೊದೆಗಳ ನಡುವೆ ವೈದ್ಯಕೀಯ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಬಟ್ಟೆ ಮತ್ತು ಪ್ಲಾಸ್ಟಿಕ್ ಚೀಲಗಳ ನಡುವೆ ನೂರಾರು ಸಿರಪ್ ಬಾಟಲಿಗಳು, ಔಷಧದ ಪ್ಯಾಕಿಂಗ್ ಸಾಮಗ್ರಿಗಳು ಹಾಗೂ ಪೊಟ್ಟಣಗಳು ರಾಶಿಯಾಗಿ ಬಿದ್ದಿರುವ ದೃಶ್ಯ ಆತಂಕ ಮೂಡಿಸಿದೆ.
ಪತ್ತೆಯಾದ ಕೆಲವು ಬಾಟಲಿಗಳ ಮೇಲೆ “Physician’s Sample (ವೈದ್ಯರ ಮಾದರಿ) – Not to be Sold” ಎಂದು ಮುದ್ರಿಸಲಾಗಿದೆ. ಮತ್ತೊಂದೆಡೆ, ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಯೋಜನೆಗೆ ಸಂಬಂಧಿಸಿದ, “Not for Sale” ಎಂದು ನಮೂದಿಸಿರುವ ORS ಪೊಟ್ಟಣಗಳೂ ಕಂಡುಬಂದಿವೆ. ಕೆಲವು ಔಷಧಗಳ ಲೇಬಲ್ ಗಳಲ್ಲಿ ಬ್ಯಾಚ್ ಸಂಖ್ಯೆ, ಪ್ರಮಾಣ ಹಾಗೂ ತಯಾರಿಕಾ ವಿವರಗಳೂ ಗೋಚರಿಸುತ್ತಿವೆ.
ಇಷ್ಟು ದೊಡ್ಡ ಪ್ರಮಾಣದ ಔಷಧ ಮತ್ತು ವೈದ್ಯಕೀಯ ಬಳಕೆಯ ವಸ್ತುಗಳು ಒಂದೇ ಸ್ಥಳದಲ್ಲಿ ಪತ್ತೆಯಾಗಿರುವುದರಿಂದ, ಇವುಗಳನ್ನು ಬೇರೆಡೆಯಿಂದ ವಾಹನದಲ್ಲಿ ತಂದು ಕೆರೆಯಂಗಳದಲ್ಲಿ ಸುರಿಯಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಈ ತ್ಯಾಜ್ಯ ಯಾವ ಆಸ್ಪತ್ರೆ, ಆರೋಗ್ಯ ಕೇಂದ್ರ, ಕ್ಲಿನಿಕ್, ಔಷಧ ಸಂಸ್ಥೆ ಅಥವಾ ಇತರ ಮೂಲದಿಂದ ಬಂದಿದೆ ಎಂಬುದು ತನಿಖೆಯಿಂದಷ್ಟೇ ದೃಢಪಡಬೇಕಾಗಿದೆ.
ಇದೇ ವೇಳೆ, ಸುಮಾರು ನಾಲ್ಕು ದಿನಗಳ ಹಿಂದೆ ರಮೇಶ್ ಎಂಬುವವರಿಗೆ ಸೇರಿದ ಎರಡು ಹಸುಗಳು ಪ್ರತ್ಯೇಕವಾಗಿ ಸಾವನ್ನಪ್ಪಿದ್ದ ಘಟನೆಯನ್ನೂ ಸ್ಥಳೀಯರು ಪ್ರಸ್ತಾಪಿಸಿದ್ದಾರೆ. ಹಸುಗಳ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಹಾಗೂ ಅದಕ್ಕೂ ಈ ತ್ಯಾಜ್ಯಕ್ಕೂ ಸಂಬಂಧ ಇರುವುದು ದೃಢಪಟ್ಟಿಲ್ಲ; ಜಾನುವಾರುಗಳು ನಿತ್ಯ ಮೇಯುವ ಕೆರೆಯಂಗಳದಲ್ಲೇ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ ಎಂದಷ್ಟೇ ಹೇಳಬಹುದು.
ಗೌಡನ ಕೆರೆಯಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಜೈವಿಕ ಮತ್ತು ಆಸ್ಪತ್ರೆ ತ್ಯಾಜ್ಯ ಸುರಿಯುತ್ತಿರುವ ಕುರಿತು ಪುರಸಭೆ ನೋಟಿಸ್ ಜಾರಿಗೊಳಿಸಿತ್ತು. ಆದರೂ ಇದೀಗ ಮತ್ತೆ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿರುವುದು ಕೈಗೊಂಡ ಕ್ರಮಗಳ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಎಬ್ಬಿಸಿದೆ.
ಪತ್ತೆಯಾಗಿರುವ ತ್ಯಾಜ್ಯದ ಮೂಲವನ್ನು ತಕ್ಷಣ ಪತ್ತೆಹಚ್ಚಿ, ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಕೆರೆಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವವರನ್ನು ಪತ್ತೆಹಚ್ಚಲು ಸಿಸಿ ಕ್ಯಾಮೆರಾ ಮತ್ತು ನಿರಂತರ ನಿಗಾ ವ್ಯವಸ್ಥೆ ಅಳವಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
In English: Hundreds of medicine bottles, syrups, expired drugs and ORS packets were found dumped at Gowdana Kere, one of Sidlaghatta town’s key water bodies, where biomedical and hospital waste had previously been reported. Some bottles were marked “Physician’s Sample – Not to be Sold,” and some ORS packets carried Karnataka Health Department “Not for Sale” markings, raising suspicion the waste was brought in from elsewhere and dumped in bulk; the source is yet to be established through investigation. Residents also noted two cattle belonging to a local resident died separately about four days earlier, though no link to the waste has been confirmed. This is not the first time waste has been dumped at the lake — the municipality had issued a notice over hospital waste disposal there previously. Locals are demanding the source be traced, safe disposal, and CCTV surveillance to catch illegal dumping.
