
Sidlaghatta : ಶಿಡ್ಲಘಟ್ಟ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಗ್ರಹಣ ಹಿಡಿದಿದ್ದು ಸಮಿತಿಯ ಮೊದಲ ಸಭೆಗೆ ಆರಂಭದಲ್ಲಿಯೆ ವಿಘ್ನ ಎದುರಾಗಿದೆ. ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಸಭೆ ಆರಂಭವಾದ ಹತ್ತೇ ಹತ್ತು ನಿಮಿಷಕ್ಕೆ ಸಭೆ ದಿಢೀರ್ ರದ್ದಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಸಮಿತಿ ಸದಸ್ಯರು ವಾಪಸ್ಸಾದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಚೊಚ್ಚಲ ಸಭೆಯಲ್ಲಿ ‘ಗೃಹ ಲಕ್ಷ್ಮಿ’ ಯೋಜನೆ ಕುರಿತು ಚರ್ಚೆ ಆರಂಭ ಮಾಡಿದ ಹತ್ತು ನಿಮಿಷಕ್ಕೆ ಸಭೆಯಲ್ಲಿದ್ದ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಅವರು ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಭೆಯನ್ನು ರದ್ದುಪಡಿಸಿರುವುದಾಗಿ ಹೇಳಿ ಸಭೆಯನ್ನು ರದ್ದುಪಡಿಸಿದರು.
ಸಮಿತಿ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಅವರು ಡಿಸಿ, ಸಿಇಒ ಹಾಗೂ ಸಚಿವ ಎಚ್.ಎಂ.ರೇವಣ್ಣ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ‘ಸಭೆ ಆರಂಭವಾಗಿದೆ. ಸಮಿತಿಯ ಎಲ್ಲ ಸದಸ್ಯರು ಆಗಮಿಸಿದ್ದು ಏಕಾ ಏಕಿ ಸಭೆ ರದ್ದುಪಡಿಸಿದರೆ ಹೇಗೆ? ಸಭೆ ಮುಂದುವರೆಸಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡುವ ಪ್ರಯತ್ನ ನಡೆಸಿದರೂ ಎಳ್ಳೆಷ್ಟು ಉಪಯೋಗ ಆಗಲಿಲ್ಲ. ಇದರಿಂದಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಸಮಿತಿ ಅಧ್ಯಕ್ಷ, ಸದಸ್ಯರು ಬರಿಗೈಲಿ ವಾಪಸ್ಸಾಗುವಂತಾಯಿತು.
ಪ್ರತಿಭಟನೆ
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯುವುದು ತಿಳಿದು ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಅವರ ಬೆಂಬಲಿಗರು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಜಮಾಯಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರಿಲ್ಲ.
ಜೆಡಿಎಸ್, ಬಿಜೆಪಿಯಿಂದ ವಲಸೆ ಬಂದವರಿಗೆ ಸಮಿತಿಯಲ್ಲಿ ಅವಕಾಶ ನೀಡಿದ್ದು ನಿಷ್ಠಾವಂತ ಕಾಂಗ್ರೆಸ್ಸಿರನ್ನು ಕಡೆಗಣಿಸಲಾಗಿದೆ. ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದು ಅವರು ಹೊಸ ಸಮಿತಿ ರಚನೆಗೆ ಸಂಬಂಧಿಸಿದ ಸಚಿವರಿಗೆ ಶಿಫಾರಸ್ಸು ಮಾಡಿದ್ದಾರೆ.
ಶೀಘ್ರದಲ್ಲೆ ಹೊಸ ಸಮಿತಿ ರಚನೆಯಾಗಲಿದ್ದು ಅದುವರೆಗೂ ಈ ಸಮಿತಿಯ ಸಭೆ ನಡೆಸಬೇಡಿ ಎಂದು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಸಮಿತಿ ಸಭೆ ನಡೆಸದಂತೆ ಪಟ್ಟು ಹಿಡಿದು ಕುಳಿತರು.
ಪ್ರತಿಭಟನೆ ನಡೆಸಿದ ಐಎನ್‍ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಜಯ್ಯದ್ ಅಪ್ನಾನ್, ಮುಖಂಡರಾದ ನಾಗನರಸಿಂಹ, ಮುತ್ತೂರುವೆಂಕಟೇಶ್, ಕೆ.ನಾರಾಯಣಸ್ವಾಮಿ, ಆನೂರು ರವಿ, ದೇವರಮಳ್ಳೂರು ರವಿ, ಆನೂರು ಚಲಪತಿ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದರು.
ನಂತರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯನ್ನು ಇಒ ಆರ್.ಹೇಮಾವತಿ ಅವರು ಹಿರಿಯ ಅಧಿಕಾರಿಗಳ ಸೂಚನೆಯಂತೆ ಮದ್ಯಾಹ್ನ 12.45ಕ್ಕೆ ಸಭೆ ಆರಂಭಿಸಿದರಾದರೂ ಸಭೆ ಆರಂಭಿಸಿದ 10 ನಿಮಿಷಕ್ಕೆಲ್ಲಾ ಸಭೆಯನ್ನು ರದ್ದುಪಡಿಸಲು ಸೂಚಿಸಿ ಡಿಸಿ ಪಿ.ಎನ್.ರವೀಂದ್ರ ಅವರಿಂದ ಮೊಬೈಲ್ ಕರೆ ಬಂದ ಹಿನ್ನಲೆಯಲ್ಲಿ ಸಭೆಯನ್ನು ದಿಢೀರ್ ರದ್ದುಪಡಿಸಲಾಯಿತು.