Sidlaghatta : “ಮಾನವೀಯತೆ ಬದುಕಿನ ಅತ್ಯಂತ ಮುಖ್ಯ ಮೌಲ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಾನವೀಯತೆಯನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ,” ಎಂದು ನಿವೃತ್ತ ನ್ಯಾಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.
ನಗರದ ರೈಲ್ವೆ ನಿಲ್ದಾಣದ ರಸ್ತೆಯ ಶ್ರೀ ಭುವನೇಶ್ವರಿ ವೃತ್ತದಲ್ಲಿ ಲಿಯೋ ಕ್ಲಬ್ ಆಫ್ ಕಿರಣ ಮತ್ತು ಎಂವಿಜೆ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡರು.
“ಹುಟ್ಟಿದಾಗ ಮಾನವನಾಗಿ ಹುಟ್ಟದಿದ್ದರೂ, ಬದುಕಿನಲ್ಲಿ ಮಾನವೀಯತೆ ಅಳವಡಿಸಿಕೊಂಡು ಸಾಯುವಾಗ ಮಾನವನಾಗಿ ಸಾಯುವುದಕ್ಕಿಂತ ಉತ್ತಮ ಗೌರವ ಮತ್ತೊಂದು ಇಲ್ಲ. ಶಾಂತಿಯ ಮೂಲಕ ದೇಶದಲ್ಲಿ ಬದಲಾವಣೆ ಬಂದರೆ ಅದು ಉತ್ತಮ, ಆದರೆ ಕ್ರಾಂತಿಯ ಮೂಲಕ ಬದಲಾವಣೆ ಬಂದರೆ ದೇಶಕ್ಕೆ ಆರ್ಥಿಕ ಮತ್ತು ಸಾಮಾಜಿಕ ತೊಂದರೆಗಳು ಉಂಟಾಗಬಹುದು. ಕ್ರಾಂತಿಯ ಪರಿಣಾಮವಾಗಿ ದೇಶವು ಪ್ರತ್ಯೇಕ ರಾಜ್ಯಗಳಾಗಿ ರೂಪಾಂತರಗೊಳ್ಳುವ ಅಪಾಯವಿದೆ. ಹೆಚ್ಚಿನ ರಾಜಕಾರಣಿಗಳು ತಮ್ಮದೇ ಆದ ಪ್ರತ್ಯೇಕ ರಾಷ್ಟ್ರಗಳು ಬೇಕು ಎಂದು ಕಾಯುತ್ತಿದ್ದಾರೆ. ಹಾಗಾಗಿ ಯುವಕರು ನಮ್ಮ ಹಿರಿಯರು ಕಲಿಸಿದ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಅವರು ಹೇಳಿದರು.
ಶಿಬಿರದಲ್ಲಿ 270 ಕ್ಕೂ ಹೆಚ್ಚು ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ತುಮಕೂರಿನ ನಾಗರೀಕ ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಕೆ.ಎನ್. ರಮೇಶ್, ತಹಸೀಲ್ದಾರ್ ಪೂರ್ಣಿಮಾ, ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್, ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್, ಡಾ. ಲತಾ (ಲತಾ ಪಾಲಿ ಕ್ಲಿನಿಕ್), ಲಿಯೋ ಕ್ಲಬ್ ಆಫ್ ಕಿರಣ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಲೋಕೇಶ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.