
Jangamakote, Sidlaghatta : KIADB ಯಿಂದ ಜಮೀನು ಸ್ವಾಧೀನ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿಲ್ಲ ಎಂಬ ಆರೋಪವನ್ನು ಜಂಗಮಕೋಟೆ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಂದಿಟ್ಟಿದೆ. ಈ ಕುರಿತು ಸಮಿತಿಯ ಮುಖಂಡ ನಡಿಪಿನಾಯಕನಹಳ್ಳಿಯ ಅಜಿತ್ ಕುಮಾರ್ ಜಂಗಮಕೋಟೆ ಕ್ರಾಸ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಏ.25ರಂದು ಜಮೀನನ್ನು ನೀಡಲು ಸಿದ್ಧರಾಗಿರುವ ರೈತರು ಬಿಳಿ ಚೀಟಿಯಲ್ಲಿ ಹಾಗೂ ವಿರೋಧವಿರುವವರು ಪಿಂಕ್ ಬಣ್ಣದ ಚೀಟಿಯಲ್ಲಿ ತಮ್ಮ ಅಭಿಪ್ರಾಯವನ್ನು ಹಾಜರಪಡಿಸಿದ್ದರು. ಆದರೆ ಈ ಚೀಟಿಗಳ ಎಣಿಕೆಯಲ್ಲಿ ರೈತರಿಗೆ ಭಾಗವಹಿಸಲು ಅವಕಾಶ ನೀಡದೆ ಅಧಿಕಾರಿಗಳೇ ಪ್ರಕ್ರಿಯೆಯನ್ನು ಮುಗಿಸಿರುವುದು ಪಾರದರ್ಶಕತೆಯ ಕೊರತೆಯಾಗಿದೆ ಎಂದು ಅವರು ಆರೋಪಿಸಿದರು.
ಅಭಿಪ್ರಾಯದಲ್ಲಿ ಜಮೀನನ್ನು ನೀಡಲು ಒಪ್ಪದ ರೈತರ ಸಂಖ್ಯೆ ಅಧಿಕವಾಗಿದ್ದರೂ, ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳು ಇಚ್ಛಿತ ಆಂಕಿಗಳನ್ನು ಹೊರಡಿಸಿ, ರೈತರ ವಿರೋಧದ ಧ್ವನಿಯನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಮೇ 5 ರಂದು ತಾಲ್ಲೂಕು ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಘೋಷಿಸಿದರು.
ಸಚಿವ ಡಾ. ಎಂ.ಸಿ. ಸುಧಾಕರ್ ಅವರ “ಹಸಿರು ಶಾಲು ಹಾಕಿದವರೆಲ್ಲ ರೈತರಲ್ಲ” ಎಂಬ ಹೇಳಿಕೆಯನ್ನು ಖಂಡಿಸಿದ ಅಜಿತ್ ಕುಮಾರ್, “ಈ ರೀತಿಯ ಪದಗಳನ್ನು ಬಳಸುವುದು ರೈತರ ಗೌರವಕ್ಕೆ ಧಕ್ಕೆ ತರುವಂತೆ ಇದೆ. ನೀವು ಜವಾಬ್ದಾರಿ ಸ್ಥಾನದಲ್ಲಿರುವುದರಿಂದ ಎಚ್ಚರಿಕೆಯಿಂದ ಮಾತನಾಡಬೇಕು,” ಎಂದು ಕಿವಿಮಾತು ಹೇಳಿದರು.
ಸಮಿತಿಯ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅರಿಕೆರೆ ಮುನಿರಾಜು, ದೇವರಾಜ್, ಹೊಂಬೇಗೌಡ, ಕೃಷ್ಣಮೂರ್ತಿ, ನಾಗೇಂದ್ರ, ಅಶ್ವತ್ಥನಾರಾಯಣಗೌಡ, ಮೂರ್ತಿ, ಮೋಹನ್ ಮತ್ತು ಇತರ ರೈತ ಮುಖಂಡರು ಈ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.