Sidlaghatta, Chikkaballapur : ಪ್ರತಿಯೊಬ್ಬರ ಹೃದಯದಲ್ಲಿ ಕನ್ನಡ ಬೆಳಗಲಿ. ಕನ್ನಡ ಬೆಳೆಸುವುದು, ನಾಡು ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯ. ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಭಾಷೆಯ ಕುರಿತು ಅರಿವು ಮೂಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ,” ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.
ನಗರದ ಸಲ್ಲಾಪುರಮ್ಮ ದೇವಾಲಯದ ಬಳಿ ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ರೇಷ್ಮೆ ನಗರ ಕನ್ನಡ ರಾಜ್ಯೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ನಾಡಧ್ವಜಾರೋಹಣ ನೆರವೇರಿಸಿ, 150 ಅಡಿ ಎತ್ತರದ ಕನ್ನಡ ಧ್ವಜವನ್ನು ಎತ್ತಿದರು. ಈ ಸಂದರ್ಭದಲ್ಲಿ ಕಲಾತಂಡಗಳು ಮತ್ತು ಅಮ್ಮನ ರಥಮೆರವಣಿಗೆಗೆ ಚಾಲನೆ ನೀಡಿದರು.
ಭಾಷೆ ಮತ್ತು ಸಂಸ್ಕೃತಿಯ ನಡುವಿನ ಆಪ್ತ ಸಂಬಂಧವನ್ನು ಉಲ್ಲೇಖಿಸಿದ ಅವರು, “ಕನ್ನಡ ಭಾಷೆ ಕೇವಲ ಮಾತಿನ ಮಾಧ್ಯಮವಲ್ಲ, ಅದು ನಮ್ಮ ನೆಲದ ಆತ್ಮ. ಅನೇಕ ತಲೆಮಾರುಗಳ ಕಷ್ಟ-ಸಾಧನೆಗಳ ಪರಂಪರೆಯನ್ನು ಕಾಪಾಡಿಕೊಂಡು ಬಂದ ಕನ್ನಡ, ನಮ್ಮ ಅಸ್ತಿತ್ವದ ಸಂಕೇತವಾಗಿದೆ. ರಾಜ್ಯೋತ್ಸವವು ಸ್ವಾಭಿಮಾನ ಮತ್ತು ಸಹಬಾಳ್ವೆಯ ಪ್ರತೀಕ” ಎಂದು ಹೇಳಿದರು.
ನಾಡೋತ್ಸವದ ವೇದಿಕೆ ಮೇಲೆ ಸಂಭ್ರಮ

ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಹತ್ತಿರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, “ಕನ್ನಡ ರಾಜ್ಯೋತ್ಸವವು ಕೇವಲ ಒಂದು ಹಬ್ಬವಲ್ಲ, ಅದು ನಮ್ಮ ಅಸ್ತಿತ್ವದ ಗುರುತು. ಕನ್ನಡದ ಪರಂಪರೆ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಈ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು; ನಿತ್ಯವೂ ಕನ್ನಡ ಬದುಕಲಿ, ಬೆಳಗಲಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ಗೌರವ ನೀಡುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ 33 ವಿದ್ಯಾರ್ಥಿಗಳನ್ನು, ಹಾಗು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ತಾಲ್ಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಆರ್. ಹೇಮಾವತಿ, ನಗರಸಭೆ ಪೌರಾಯುಕ್ತೆ ಜಿ. ಅಮೃತ, ನಗರಸಭೆ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಕಸಾಪ ಅಧ್ಯಕ್ಷ ನಾರಾಯಣಸ್ವಾಮಿ, ರೇಷ್ಮೆ ನಗರ ರಾಜ್ಯೋತ್ಸವ ಸಮಿತಿಯ ರಾಮಾಂಜನೇಯ, ಸೂರಿ (ಭಗತ್), ಸುನಿಲ್, ರೂಪಸಿರಮೇಶ್, ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ನಾರಾಯಣಸ್ವಾಮಿ, ಮುನಿರಾಜು (ಕುಟ್ಟಿ), ಶ್ರೀರಾಮ್, ಸೋಮಶೇಖರ್, ಲಕ್ಷ್ಮಿದೇವಿ, ಮಂಜುಳ ಎಂ., ಲಾವಣ್ಯ, ಮಂಜುಳ ಎ. ಹಾಗೂ ಕನ್ನಡ ಪರ ಮತ್ತು ರೈತ ಪರ ಸಂಘಟನೆಯ ಅನೇಕ ಸದಸ್ಯರು ಹಾಜರಿದ್ದರು.
ಜಿಲ್ಲಾಡಳಿತದ ವಿರುದ್ಧ ಕಲಾವಿದನ ವಿನೂತನ ಪ್ರತಿಭಟನೆ
View on Threads
“ನಮ್ಮಂತಹ ಕಲಾವಿದರಿಗೆ ಮರಣೋತ್ತರ ಪ್ರಶಸ್ತಿಯನ್ನಾದರೂಳು ಜಿಲ್ಲಾಡಳಿತ ನೀಡಲಿ” ಎಂದು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು ಕವಿ, ಕಲಾವಿದ ಈಧರೆ ತಿರುಮಲ ಪ್ರಕಾಶ್.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಶಿಡ್ಲಘಟ್ಟವನ್ನು ಕಡೆಗಣಿಸಿರುವ ಬಗ್ಗೆ, ತಮ್ಮ ಸಾಧನೆಯನ್ನು ಕಡೆಗಣಿಸಿರುವ ಬಗ್ಗೆ ಈಧರೆ ತಿರುಮಲ ಪ್ರಕಾಶ್ ಅವರು ತಮಗೆ ಲಭಿಸಿರುವ ಪ್ರಮಾಣಪತ್ರಗಳನ್ನು ಹಾರದಂತೆ ಧರಿಸಿ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.