Sidlaghatta : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 1 ರಂದು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದರು.
ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನವೆಂಬರ್ 1 ರಂದು ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದ ಬಳಿ ಶಾಸಕರು ಧ್ವಜಾರೋಹಣ ನಡೆಸಿ ಸಂದೇಶ ನೀಡಲಿದ್ದಾರೆ. ಧ್ವಜಾ ರೋಹಣ ಮಾಡಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಅಂದು ಬೆಳಗ್ಗೆ 8 ಗಂಟೆಗೆ ಬಸ್ ನಿಲ್ದಾಣ ದಿಂದ ಕನ್ನಡ ತಾಯಿ ಭುವನೇಶ್ವರಿದೇವಿಯ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ ಎಂದರು.
ಸಮಾರಂಭದಲ್ಲಿ ಪೊಲೀಸ್, ಅಬಕಾರಿ, ಅರಣ್ಯ, ಗೃಹ ರಕ್ಷಕ, ಎನ್.ಸಿ.ಸಿ, ಸ್ಕೌಟ್ ಮತ್ತು ಗೈಡ್ಸ್, ಸೇವಾದಳ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕವಾಯತು ನಡೆಯಲಿದ್ದು, ನಂತರದಲ್ಲಿ ಶಾಲಾ ವಿದ್ಯಾಥಿಗಳಿಂದ ಗುಂಪು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಇ ಓ ವೆಂಕಟೇಶ್, ನಗರ ಸಭೆ ಪೌರಾಯುಕ್ತ ಶ್ರೀಕಾಂತ್, ಎ.ಎಂ.ತ್ಯಾಗರಾಜ್, ಸುರೇಂದ್ರಗೌಡ, ಜೆ.ಎಸ್.ವೆಂಕಟ ಸ್ವಾಮಿ ಹಾಜರಿದ್ದರು.