
ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳಿನಲ್ಲಿ ಪಾವತಿಸಿದ ಆಸ್ತಿಗಳ ಮಾಲೀಕರಿಗೆ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಮೇ ಮತ್ತು ಜೂನ್ ತಿಂಗಳಿನಲ್ಲಿ ದಂಡ ರಹಿತ ಪಾವತಿಸಲು ಅವಕಾಶ ಇರುತ್ತದೆ ಎಂದು ನಗರಸಭೆ ಅಧ್ಯಕ್ಷ ಸುಮಿತ್ರ ರಮೇಶ್ ತಿಳಿಸಿದರು.
ನಗರಸಭೆ ವತಿಯಿಂದ ಕಂದಾಯ ತೆರಿಗೆ ವಸೂಲಾತಿ ಆಂದೋಲನ ಜಾಥಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮನೆ ಮಾಲೀಕರು ವಾಣಿಜ್ಯ ಹಾಗೂ ಕೈಗಾರಿಕೆಗಳು ಸೇರಿದಂತೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವ ಮೂಲಕ ರಿಯಾಯಿತಿ ಹಾಗೂ ದಂಡ ರಹಿತದ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಕಂದಾಯ ತೆರಿಗೆ ಆಂದೋಲನಕ್ಕೆ ಚಾಲನೆ ಕೊಡಲಾಗಿದೆ. ಟ್ರೇಡ್ ಲೈಸೆನ್ಸ್ ಇಲ್ಲದವರು ಪರವಾನಗಿ ಮಾಡಿಸಿಕೊಳ್ಳಬೇಕು, ಇರುವವರು ನವೀಕರಣ ಮಾಡಿಸಿಕೊಳ್ಳಿ. ಕಾನೂನು ಬಾಹಿರ ನಡೆಸುವ ಟ್ರೇಡ್ ಲೈಸನ್ಸ್ ದಾರರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಗದಿತ ಸಮಯದೊಳಗೆ ತೆರಿಗೆಯನ್ನು ಪಾವತಿಸದೇ ಇದ್ದಲ್ಲಿ, ಚಾಲ್ತಿಯಲ್ಲಿರುವ ನಿಯಮದಂತೆ ಕಾನೂನು ಕ್ರಮ ವಹಿಸಲಾಗುವುದು ಎಂದರು.
ಕಂದಾಯ ತೆರಿಗೆ ಆಂದೋಲನದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ನಗರಸಭೆ ಸಿಬ್ಬಂದಿಯಿಂದ ಪ್ರಚಾರ ಜಾಥ ನಡೆಯಿತು.