Home News ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

0

Sidlaghatta : ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಎಂ.ವಿ.ವೆಂಕಟಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‌ ನ ರೂಪನವೀನ್ ಚುನಾಯಿತರಾಗಿದ್ದಾರೆ. ಈ ಮೂಲಕ ನಗರಸಭೆ ಅಧಿಕಾರವು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳ ಪಾಲಾಗಿದೆ. ಸಂಖ್ಯಾಬಲವಿದ್ದರೂ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಾಳಯ ಸೋತಿದೆ. ವಿಶೇಷವೆಂದರೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಏಳು ಮಂದಿ ಕಾಂಗ್ರೆಸ್ ಸದಸ್ಯರು ಬೆಂಬಲಿಸಿ, ನೆರವಾಗಿದ್ದಾರೆ.

ಅಧ್ಯಕ್ಷಸ್ಥಾನಕ್ಕೆ ಜೆಡಿಎಸ್‌ ನ 9ನೇ ವಾರ್ಡ್‌ ನ ವೆಂಕಟಸ್ವಾಮಿ, ಕಾಂಗ್ರೆಸ್‌ನ 31 ನೇ ವಾರ್ಡಿನ ಎಂ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷಸ್ಥಾನಕ್ಕೆ ಜೆಡಿಎಸ್‌ನ 30 ನೇ ವಾರ್ಡಿನ ರೂಪ ನವೀನ್ ಮತ್ತು ಕಾಂಗ್ರೆಸ್‌ನ 26 ನೇ ವಾರ್ಡಿನ ಸಲ್ಮಾತಾಜ್ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ ಎಂ.ವಿ.ವೆಂಕಟಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರೂಪ ನವೀನ್ ಅವರು ಶಾಸಕ ಹಾಗೂ ಸಂಸದರ ತಲಾ ಒಂದೊಂದು ಮತ ಸೇರಿದಂತೆ ಒಟ್ಟು ತಲಾ 21 ಮತಗಳನ್ನು ಪಡೆಯುವ ಮೂಲಕ ಗೆದ್ದು ಬೀಗಿದ್ದಾರೆ. 10 ಮತಗಳನ್ನು ಪಡೆದು ಕಾಂಗ್ರೆಸ್‌ನ ಎಂ.ಶ್ರೀನಿವಾಸ್ ಮತ್ತು ಸಲ್ಮಾತಾಜ್ ಪರಾಭವಗೊಂಡಿದ್ದಾರೆ.

ನಗರಸಭೆಯಲ್ಲಿ ಕಾಂಗ್ರೆಸ್-13, ಜೆಡಿಎಸ್-10, ಬಿಜೆಪಿ-2, ಬಿ.ಎಸ್‌.ಪಿ-2 ಹಾಗೂ ಸ್ವತಂತ್ರರು-4 ಸೇರಿ ಒಟ್ಟು 31 ಸಂಖ್ಯಾಬಲವಿದೆ.

ಈ ಪೈಕಿ ಕಾಂಗ್ರೆಸ್‌ನ ಶಿವಮ್ಮ ಹಾಗೂ ಜೆಡಿಎಸ್‌ ನ ಮುಸ್ತರುನ್ನಿಸಾ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗಿದ್ದು 29 ಸದಸ್ಯರು ಹಾಜರಾಗಿದ್ದರು.

ಜೆಡಿಎಸ್ ಅಭ್ಯರ್ಥಿಗಳ ಪರ 19 ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ 10 ಮತಗಳಷ್ಟೆ ಬಿದ್ದಿದ್ದವು. ಶಾಸಕ ಬಿ.ಎನ್.ರವಿಕುಮಾರ್, ಸಂಸದ ಮಲ್ಲೇಶ್‌ಬಾಬು ಜೆಡಿಎಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ.

ಭಾರೀ ಕುತೂಹಲ ಕೆರಳಿಸಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ :

ಶತಾಯ ಗತಾಯ ಈ ಬಾರಿ ನಗರಸಭೆಯ ಅಧ್ಯಕ್ಷ ಸ್ಥಾನ ಹಿಡಿಯಲೇ ಬೇಕು ಎಂಬ ಹಠದಿಂದ ಕಾಂಗ್ರೆಸ್ ಹಾಗು ಜೆಡಿಎಸ್ ಮುಖಂಡರು ಕಳೆದ ಕೆಲ ದಿನಗಳಿಂದ ನಗರಸಭೆ ಸದಸ್ಯರನ್ನು ತಮ್ಮೆಡೆಗೆ ಸೆಳೆಯಲು ಯತ್ನಿಸಿದರಾದರೂ ಅಂತಿಮವಾಗಿ ನಗರಸಭೆಯ ಬಹುತೇಕ ಸದಸ್ಯರ ಮನವೊಲಿಸುವಲ್ಲಿ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಯಶಸ್ವಿಯಾಗಿದ್ದಾರೆ.

6 ಮಂದಿ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಅಭ್ಯರ್ಥಿಯ ಪರ ಮತ :

ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷದ ಸದಸ್ಯರು ಹಾವು ಮುಂಗುಸಿಯಂತೆ ವರ್ತಿಸುತ್ತಾರೆ. ಆದರೆ ಶಿಡ್ಲಘಟ್ಟ ನಗರಸಭೆ ಅಧ್ಯಕ್ಷ ಉಪಾದ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ 6 ಕಾಂಗ್ರೆಸ್ ಸದಸ್ಯರು ಅಭ್ಯರ್ಥಿಯ ಮತ ಚಲಾಯಿಸುವ ಮೂಲಕ ಬೆಂಬಲಿಸಿದರೆ, ಓರ್ವ ಸದಸ್ಯೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ ಗೈರು ಆಗುವ ಮೂಲಕ ಬೆಂಬಲಿಸಿದ್ದಾರೆ.

ಕಾಂಗ್ರೆಸ್ ಗೆ ನಿರಾಸೆ :

ನಗರಸಭೆಯ ಒಟ್ಟು 31 ಸದಸ್ಯರ ಪೈಕಿ 13 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಸೂಕ್ತ ಅಧ್ಯಕ್ಷ ಅಭ್ಯರ್ಥಿಯ ಆಯ್ಕೆಯ ಕಾರಣವೋ ಎನೋ ತಮ್ಮದೇ ಪಕ್ಷದ ಅರ್ಧಕ್ಕೂ ಹೆಚ್ಚು ಸದಸ್ಯರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಬಾರೀ ನಿರಾಸೆಯುಂಟಾಗಿದೆ.

ಜೆಡಿಎಸ್ ಕಾರ್ಯಕರ್ತರ ಸಂಭ್ರಮ:

ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ನಗರಸಭೆ ಆವರಣದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು ಜಮಾಯಿಸಿ ಜೈಕಾರಗಳನ್ನು ಕೂಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್ :

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಹಿನ್ನಲೆಯಲ್ಲಿ ನಗರಸಭೆ ಸುತ್ತಮುತ್ತಲೂ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

ಈ ಸಂದರ್ಬದಲ್ಲಿ ಕೋಲಾರ ಸಂಸದ ಎಂ.ಮಲ್ಲೇಶ್‌ಬಾಬು, ಶಾಸಕ ಬಿ.ಎನ್.ರವಿಕುಮಾರ್, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ನಗರಸಭೆ ನೂತನ ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪನವೀನ್ ಸೇರಿದಂತೆ ಜೆಡಿಎಸ್, ಬಿಜೆಪಿ ಹಾಗು ಕಾಂಗ್ರೆಸ್‌ನ ನಗರಸಭಾ ಸದಸ್ಯರು ಹಾಜರಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version