
Sidlaghatta : ಶಿಡ್ಲಘಟ್ಟ ತಾಲ್ಲೂಕಿನ PLD ಬ್ಯಾಂಕ್‌ನ 87ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಗುರುವಾರ ಬ್ಯಾಂಕ್ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ಈ ಬ್ಯಾಂಕನ್ನು ಅನೇಕ ಮಹನೀಯರು ಕಟ್ಟಿ ಬೆಳೆಸಿದ್ದಾರೆ. ಈಗ ಪಕ್ಷಾತೀತವಾಗಿ ಎಲ್ಲರೂ ಸೇರಿ ಬ್ಯಾಂಕ್ ಅನ್ನು ಉಳಿಸಿ ಬೆಳೆಸಬೇಕು. ಇದರ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಒದಗಿಸಬೇಕು” ಎಂದು ಹೇಳಿದರು.
ಅವರು ಮುಂದುವರಿದು, “ತಾಲ್ಲೂಕಿನ ಮುಖಂಡರು ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಡುವ ಬದಲಿಗೆ ಈ ಬ್ಯಾಂಕಿನಲ್ಲಿ ಠೇವಣಿ ಮಾಡಿದರೆ, ಇನ್ನಷ್ಟು ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಬ್ಯಾಂಕ್‌ನ ಆಡಳಿತ ಮಂಡಳಿ ಪಕ್ಷಾತೀತವಾಗಿ ಎಲ್ಲಾ ಅರ್ಹ ರೈತರಿಗೆ ಸಾಲ ಹಾಗೂ ಸವಲತ್ತುಗಳನ್ನು ತಲುಪಿಸಬೇಕು. ಜೊತೆಗೆ ಸಾಲ ವಸೂಲಾತಿಯಲ್ಲಿಯೂ ಪ್ರಾಮಾಣಿಕತೆ ಕಾಪಾಡಬೇಕು” ಎಂದು ಹೇಳಿದರು.
ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, “ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಹಣ ಪಾವತಿಸಿದಾಗ ಮಾತ್ರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಬ್ಯಾಂಕ್ ಈಗ ಸಂಪೂರ್ಣ ಗಣಕೀಕೃತವಾಗಿರುವುದರಿಂದ ಪಡೆದ ಸಾಲವನ್ನು ಸೆಪ್ಟೆಂಬರ್ 30ರೊಳಗೆ ಪಾವತಿಸಲೇಬೇಕು. ಪಾವತಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.
ಸಭೆಯಲ್ಲಿ 2023–24ನೇ ಸಾಲಿನ ಜಮಾ ಖರ್ಚು ಹಾಗೂ 2024–25ನೇ ಸಾಲಿನ ಬಜೆಟ್ ಮಂಡನೆಗೊಂಡು ಅಂಗೀಕೃತವಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ರಾಮಚಂದ್ರ ಡಿ.ಎನ್., ನಿರ್ದೇಶಕರಾದ ಭೀಮೇಶ್, ಎಂ.ಪಿ. ರವಿ, ಡಿ.ಬಿ. ವೆಂಕಟೇಶ್, ಮುರಳಿ, ಸುರೇಶ್, ಎನ್. ಚಂದ್ರನಾಥ್, ಎಚ್.ಕೆ. ಮಂಜುನಾಥ್, ಶ್ರೀನಿವಾಸ್, ನರಸಿಂಹಪ್ಪ, ಭಾಗ್ಯಮ್ಮ, ಸುನಂದಮ್ಮ, ಕಿಶೋರ್ ಹಾಗೂ ಜಿಲ್ಲಾ ವ್ಯವಸ್ಥಾಪಕ ಬೈರೇಗೌಡ, ವ್ಯವಸ್ಥಾಪಕ ಆರ್. ಶ್ರೀನಾಥ್ ಸೇರಿದಂತೆ ಸಿಬ್ಬಂದಿ ಮತ್ತು ಸದಸ್ಯರು ಹಾಜರಿದ್ದರು.