
Sidlaghatta : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡ ಅವರನ್ನು ಹೆಚ್ಚಿನ ವಿಚಾರಣೆಗೆ 2 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಶಿಡ್ಲಘಟ್ಟದ ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದ್ದು ಜ.30ರಂದು ಶುಕ್ರವಾರಕ್ಕೆ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ.
ಕೇರಳದ ಗಡಿಯಲ್ಲಿ ರಾಜೀವ್ ಗೌಡರನ್ನು ಬಂಧಿಸಿದ್ದ ಪೊಲೀಸರು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಜ.9ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ನ್ಯಾಯಾಲಯವು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬುಧವಾರ ಆದೇಶಿಸಿದೆ.
ರಾಜೀವ್ ಗೌಡ ಅವರು ಪೌರಾಯುಕ್ತೆ ಅಮೃತ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದ ಮೊಬೈಲ್ ನ್ನು ವಶಪಡಿಸಿಕೊಳ್ಳಬೇಕಿದೆ. ಜತೆಗೆ ಅವರು 12 ದಿನಗಳ ಕಾಲ ಎಲ್ಲೆಲ್ಲಿ ಸುತ್ತಾಡಿದರು, ಯಾರು ಇವರಿಗೆ ಆಶ್ರಯ ನೀಡಿದ್ದರು ಎಂಬಿತ್ಯಾದಿ ಅನೇಕ ವಿಷಯಗಳ ಬಗ್ಗೆ ತನಿಖೆ ನಡೆಸಬೇಕಿದ್ದು ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು.
ಆದರೆ ನ್ಯಾಯಾಧೀಶರು ನೆನ್ನೆ ಪೊಲೀಸ್ ಕಸ್ಟಡಿಗೆ ನೀಡದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಾದರೂ ಇಂದು ಪೊಲೀಸರ ವಶಕ್ಕೆ ನೀಡಲು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾ.ಮೊಹಮ್ಮದ್ ರೋಷನ್ ಷಾ ಆದೇಶಿಸಿದರು.