Sidlaghatta : ಶಿಡ್ಲಘಟ್ಟ ನಗರದ ರೇಣುಕಾ ಯಲ್ಲಮ್ಮದೇವಿಯ ಹಸಿ ಕರಗವು ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ರೇಣುಕಾ ಯಲ್ಲಮ್ಮದೇವಿಯ ಕರಗವು ಯುಗಾದಿಯ ದಿನದಂದು ಧ್ವಜಾರೋಹಣದಿಂದ ಆರಂಭವಾಗಿ ಆರುದಿನಗಳ ಕಾಲ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಯುಗಾದಿಯ ದಿನ ರಾತ್ರಿ ನಡೆದ ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದ ಕಾರ್ಯ.
ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮ್ಲಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸುತ್ತಾರೆ. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಾರೆ.
ಕರಗದ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಅಲಂಕಾರವಿದ್ದು ತುದಿಯಿಂದ ಇಳಿಬಿಟ್ಟ ಹೂ ಸರಗಳನ್ನು ಹೊರುವವರ ಭುಜದಿಂದ ಕೆಳಕ್ಕೆ ಮಾಲೆಯಂತೆ ಹರಡಿಕೊಳ್ಳುವ ರೀತಿಯಲ್ಲಿ ಕಟ್ಟಿರುತ್ತಾರೆ.
ಕರಗವನ್ನು ಹೊತ್ತಮೇಲೆ ಮತ್ತೊಮ್ಮೆ ವಿಶೇಷ ಮಂಗಳಾರತಿಯಾದ ನಂತರ ಸ್ತುತಿಪದ್ಯಗಳನ್ನು ಹೇಳುವ ಪೂಜಾರಿ ಹಾಗೂ ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿತು. ದಾರಿಯುದ್ದಕ್ಕೂ ಭಕ್ತಾದಿಗಳಿಂದ ಪೂಜೆ ಸೇವೆ ನಡೆಯಿತು. ನಗರದ ಹಲವಾರು ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಸನ್ಮಾನ ಕಾರ್ಯಕ್ರಮ

ಕರಗದ ಕಾರ್ಯಕ್ರಮದಲ್ಲಿ ವಹ್ನಿಕುಲ ಕ್ಷತ್ರಿಯ ಜನಾಂಗದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಕೆ.ಎನ್. ಫೌಂಡೇಶನ್ ವತಿಯಿಂದ ಅಧ್ಯಕ್ಷ ಡಾ.ರಾಜಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಾಲಯದ ಬಳಿ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ಕರಗದ ಪೂಜಾರಿ ಪಿ. ಎನ್. ರಮೇಶ್, ಗಣಾಚಾರಿ ಗಿರೀಶ್, ದೇವಾಲಯದ ಸಮಿತಿ ಅಧ್ಯಕ್ಷ ಕೆ. ವಿ. ನಾರಾಯಣಸ್ವಾಮಿ, ಮೇಲೂರು ಪೈಲ್ವಾನ್ ಗೋವಿಂದಪ್ಪ, ನಾರಾಯಣಸ್ವಾಮಿ, ಪ್ರವೀಣ್ ಮತ್ತು ಎಂ.ಅಜಯ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಯಜಮಾನ ಹನುಮಂತಪ್ಪ, ಗಣಾಚಾರಿ ಪೂಜಾರಿ ಮಾಧವಪ್ಪ, ವೇದಮೂರ್ತಿ, ಮಾಜಿ ನಗರಸಭಾ ಸದಸ್ಯೆ ಚಿತ್ರಮನೋಹರ್, ವಹ್ನಿಕುಲ ಕ್ಷತ್ರಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೀಪು, ಗೌಡಪ್ಪನವರ ಕುಮಾರ್ ಮುನಿಯಪ್ಪ ಹಾಜರಿದ್ದರು