Sidlaghatta, Chikkaballapur : “ಸಂಚಾರಿ ನಿಯಮಗಳನ್ನು ಪಾಲಿಸುವುದು ಕೇವಲ ಕಾನೂನು ಪಾಲನೆ ಅಲ್ಲ — ಅದು ನಿಮ್ಮ ಜೀವ ಉಳಿಸುವ ಕ್ರಮ,” ಎಂದು ಶಿಡ್ಲಘಟ್ಟ ನಗರ ಠಾಣೆಯ ಎಸ್.ಐ ವೇಣುಗೋಪಾಲ್ ಅವರು ತಿಳಿಸಿದರು.
ನಗರದ ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ನಡೆದ ಶಾಲಾ ಮತ್ತು ಕಾಲೇಜುಗಳ ಮುಖ್ಯಸ್ಥರು ಹಾಗೂ ವಾಹನ ಚಾಲಕರ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳನ್ನು ಕರೆತರಲು ಬಳಸುವ ವಾಹನಗಳ ಚಾಲಕರು ನಿಯಮ ಪಾಲನೆಗೆ ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದು ಅವರು ಹೇಳಿದರು.
“ವಾಹನ ಚಲಾಯಿಸುವ ಮುನ್ನ ಅದರ ಬ್ರೇಕ್, ಲೈಟ್, ಟೈರ್, ಮಿರರ್ ಇತ್ಯಾದಿ ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಬೈಕ್ ಸವಾರರು ಐ.ಎಸ್.ಐ ಮಾರ್ಕ್‌ನ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು, ಹಾಗೂ ಕಾರು ಚಾಲಕರು ಸೀಟ್‌ಬೆಲ್ಟ್ ಹಾಕಿಕೊಳ್ಳಬೇಕು. ಇವು ಕಡ್ಡಾಯ, ” ಎಂದು ವೇಣುಗೋಪಾಲ್ ಹೇಳಿದರು.
“ರಸ್ತೆಯಲ್ಲಿ ಸಿಗ್ನಲ್ ಹಾಗೂ ಚಿಹ್ನೆಗಳನ್ನು ಗೌರವಿಸಿ, ನಿಗದಿತ ವೇಗ ಮೀರಬೇಡಿ. ಮೊಬೈಲ್‌ನಲ್ಲಿ ಮಾತನಾಡುತ್ತಾ ಅಥವಾ ಹಾಡು ಕೇಳುತ್ತಾ ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗಬಹುದು. ಮದ್ಯಪಾನ ಮಾಡಿ ಯಾವುದೇ ವಾಹನ ಚಲಾಯಿಸಬಾರದು – ಇದು ನಿಮ್ಮ ಪ್ರಾಣಕ್ಕೂ ಇತರರಿಗೂ ಅಪಾಯ,” ಎಂದು ಎಚ್ಚರಿಸಿದರು.
ಶಾಲೆ ಮತ್ತು ಆಸ್ಪತ್ರೆಗಳ ಬಳಿ ನಿಧಾನವಾಗಿ ಚಾಲನೆ ಮಾಡಬೇಕು, ತಿರುವುಗಳಲ್ಲಿ ಅಥವಾ ಓವರ್‌ಟೇಕ್ ಮಾಡುವಾಗ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು. ಶಾಲಾ ವಾಹನ ಚಾಲಕರು “ಭವಿಷ್ಯದ ಪ್ರಜೆಗಳನ್ನು ಕರೆತರ್ತಿದ್ದಾರೆ” ಎಂಬ ಅರಿವಿನಿಂದ ಹೆಚ್ಚು ಜವಾಬ್ದಾರಿ ವಹಿಸಬೇಕೆಂದು ಸಲಹೆ ನೀಡಿದರು.
ಕೊನೆಗೆ, “ಮಳೆ, ಮಂಜು ಅಥವಾ ಕತ್ತಲೆಯಲ್ಲಿ ಲೈಟ್ ಆನ್ ಮಾಡಿಕೊಂಡು ನಿಧಾನವಾಗಿ ಹೋಗಿ. ವಾಹನದ ದಾಖಲೆಗಳು ಸರಿಯಾಗಿರಲಿ. ಇದು ನಿಮ್ಮ ಕುಟುಂಬದ ಸುರಕ್ಷತೆಗೂ ಹಾಗೂ ಸಮಾಜದ ಶಾಂತಿಗೂ ಅಗತ್ಯ,” ಎಂದು ಎಸ್.ಐ ವೇಣುಗೋಪಾಲ್ ಹೇಳಿದರು.
ಸಭೆಯಲ್ಲಿ ಶಾಲಾ ಮತ್ತು ಕಾಲೇಜು ಮುಖ್ಯಸ್ಥರು, ಶಿಕ್ಷಕರು ಮತ್ತು ಚಾಲಕರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
