ಶಿಡ್ಲಘಟ್ಟ ನಗರದ ಪುರಾತನ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರವೇ ನಗರದಲ್ಲಿ ಶುಭಕಾರ್ಯಗಳು ಪ್ರಾರಂಭವಾಗುವ ಸಂಪ್ರದಾಯವಿದೆ.
“ಊರದೇವರು” ಎಂದೇ ಪ್ರಸಿದ್ಧವಾದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಹಿತ ಎಲ್ಲ ಕೈಂಕರ್ಯಗಳು ಪಾಂಚರಾತ್ರಾಗಮ ಪದ್ಧತಿಯಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶಾಸಕ ವಿ.ಮುನಿಯಪ್ಪ ಮತ್ತು ಶಿರಸ್ತೆದಾರ್ ಮಂಜುನಾಥ್ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ತಮಟೆ ವಾದನ, ಮಂಗಳ ವಾದ್ಯಗಳ ಮಧ್ಯೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಹೆಸರುಬೇಳೆ ಹಂಚಲಾಯಿತು.
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಪೂಜಾ ಕಾರ್ಯಕ್ರಮಗಳು ಒಂದು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಜಾತಿಯವರೂ ವಿವಿಧ ಕೈಂಕರ್ಯಗಳಲ್ಲಿ ಭಾಗಿಯಾಗುವುದು ವಿಶೇಷವಾಗಿದೆ.
ಅರ್ಚಕ ವೈ.ಎನ್.ದಾಶರಥಿಭಟ್ಟಾಚಾರ್ಯ, ದೇಗುಲ ಸಮಿತಿ ಸದಸ್ಯರು, ಶ್ರೀ ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಸದಸ್ಯರು ಹಾಜರಿದ್ದರು.