Sidlaghatta : ಶಿಡ್ಲಘಟ್ಟ ನಗರದ 9ನೇ ವಾರ್ಡ್ ನಲ್ಲಿ ಕಳೆದ ಆರು ತಿಂಗಳಿಂದ ಮುಂದುವರಿದಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಸೋಮವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಕುಡಿಯುವ ನೀರು, ಚರಂಡಿ ಸ್ವಚ್ಛತೆ ಹಾಗೂ ಮೂಲಸೌಕರ್ಯ ಸಮಸ್ಯೆಗಳಿಗೆ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಮಾತನಾಡಿ, “ವಾರ್ಡ್ನಲ್ಲಿ ಯಾವುದೇ ಸಮಸ್ಯೆ ಇದ್ದರೂ ಲಿಖಿತ ದೂರು ನೀಡಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಎಲ್ಲರೂ ವಿದ್ಯಾವಂತರಾಗಿರುವುದಿಲ್ಲ. ನಮ್ಮ ವಾರ್ಡ್ ನಲ್ಲಿ ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿಯೊಂದು ಸಮಸ್ಯೆಗೂ ಅರ್ಜಿ ಬರೆಯುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಪರಿಶೀಲಿಸಬೇಕು” ಎಂದು ಒತ್ತಾಯಿಸಿದರು.
“7, 8 ಮತ್ತು 9ನೇ ವಾರ್ಡ್ ಗಳಲ್ಲಿ ಬಡವರು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೇರೆ ವಾರ್ಡ್ ಗಳಲ್ಲಿ ನೀರು ಸರಬರಾಜಾಗುತ್ತಿದೆ. ನಮ್ಮ ವಾರ್ಡ್ ನ ಸಮಸ್ಯೆಯನ್ನು ಮಾತ್ರ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕುಡಿಯುವ ನೀರು ನಮ್ಮ ಮೂಲಭೂತ ಹಕ್ಕು” ಎಂದು ಹೇಳಿದರು.
ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸುತ್ತಿಲ್ಲ. ಅಗತ್ಯ ಮೂಲಸೌಕರ್ಯಗಳ ಕೊರತೆಯೂ ಇದೆ. ಸಮಸ್ಯೆ ಹೇಳಲು ಹೋದಾಗ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ದೂರಿದರು.
ನಗರಸಭೆಯಲ್ಲಿ ಚುನಾಯಿತ ಸದಸ್ಯರಿಲ್ಲದಿರುವ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳೇ ಉತ್ತರಿಸಬೇಕು. ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಆಗ್ರಹಿಸಿದರು.
ಕಳೆದ ಆರು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಪರಿಹಾರ ಕಂಡುಕೊಳ್ಳದಿರುವುದಕ್ಕೆ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ವಾರ್ಡ್ಗೆ ಭೇಟಿ ನೀಡಿ ಕುಡಿಯುವ ನೀರು ಹಾಗೂ ಚರಂಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
“ಬಿಂದಿಗೆ ಹಿಡಿದು ರಸ್ತೆಗಿಳಿಯುವ ಪರಿಸ್ಥಿತಿ ಬಂದಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಬೇಕು” ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೈಯದ್ ಹುಸೇನ್, ನರಸಿಂಹಮೂರ್ತಿ, ನವೀನ್, ಸಾಧಿಕ್, ಜಯಮ್ಮ, ದೇವಮ್ಮ, ನಿರ್ಮಲಮ್ಮ, ನಾರಾಯಣಮ್ಮ ಸೇರಿದಂತೆ ಹಲವು ನಿವಾಸಿಗಳು ಪಾಲ್ಗೊಂಡಿದ್ದರು.
ಇತ್ತೀಚೆಗೆ ತಾಲ್ಲೂಕಿನ ತಲಕಾಯಲಬೆಟ್ಟದಲ್ಲೂ ನೀರು ಮತ್ತು ನೈರ್ಮಲ್ಯ ಸಮಸ್ಯೆ ಕುರಿತು ಪ್ರತಿಭಟನೆ ನಡೆದಿತ್ತು.
In English: Women in Sidlaghatta’s Ward 9 held a street protest with empty water pots, demanding a solution to a drinking water shortage that has persisted for six months. Residents alleged municipal officials were unresponsive to complaints about water supply, drain cleaning and infrastructure, and that wards with larger poor, Dalit and minority populations were being neglected while other wards received regular supply. With no elected council currently in place, residents said officials must directly address grievances, warning of a siege protest at the municipal office if the issue isn’t resolved.

