
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯಪ್ಪನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ ಸ್ವಚ್ಛತೆ ಹಾಗೂ ಅಂಗನವಾಡಿ ಮೂಲಸೌಕರ್ಯ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಎಷ್ಟು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ?
ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕೊಳವೆ ಬಾವಿಯ ಮೋಟರ್ ದುರಸ್ತಿಯಾಗದೆ ನೀರಿನ ಸಮಸ್ಯೆ ತೀವ್ರಗೊಂಡಿದೆ ಎಂದು ಗ್ರಾಮಸ್ಥರು ದೂರಿದರು. ಶುದ್ಧ ಕುಡಿಯುವ ನೀರಿನ ಘಟಕವೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮ ಗ್ರಾಮಸ್ಥರು ಬೇರೆ ಗ್ರಾಮಗಳಿಗೆ ತೆರಳಿ ಕುಡಿಯುವ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಚರಂಡಿ, ಅಂಗನವಾಡಿ ಸ್ಥಿತಿ ಏನು?
ಗ್ರಾಮದ ಚರಂಡಿಗಳು ಕಸ, ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ತುಂಬಿಕೊಂಡಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹಲವು ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರದಲ್ಲಿಯೂ ಅಗತ್ಯ ಮೂಲಸೌಕರ್ಯಗಳ ಕೊರತೆ ಇದೆ ಎಂದು ಗ್ರಾಮಸ್ಥರು ಹಾಗೂ ಸಿಬ್ಬಂದಿ ತಿಳಿಸಿದರು. ಕೇಂದ್ರಕ್ಕೆ ಕಾಂಪೌಂಡ್ ಗೋಡೆ ಮತ್ತು ಶೌಚಾಲಯದ ಸಮರ್ಪಕ ವ್ಯವಸ್ಥೆ ಇಲ್ಲ. ಶೌಚಾಲಯದ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು, ಅಡುಗೆ ಮಾಡಲು ಸೂಕ್ತ ಅಡುಗೆಮನೆ ಇಲ್ಲದ ಕಾರಣ ನೆಲದ ಮೇಲೆ ಸ್ಟೌ ಇಟ್ಟು ಅಡುಗೆ ಮಾಡಬೇಕಾದ ಸ್ಥಿತಿ ಇದೆ ಎಂದು ಆರೋಪಿಸಿದರು.
ಗ್ರಾಮಸ್ಥರ ಆಕ್ರೋಶ ಏನು?
ಗ್ರಾಮಸ್ಥ ಬಾಬಜಾನ್ ಮಾತನಾಡಿ, “ಹತ್ತು ದಿನಗಳಿಂದ ಸಮರ್ಪಕವಾಗಿ ನೀರು ಬಂದಿಲ್ಲ. ಗ್ರಾಮದಲ್ಲಿ ಎರಡು ಕೊಳವೆ ಬಾವಿಗಳಿದ್ದರೂ ಸರಿಯಾದ ನಿರ್ವಹಣೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕವೂ ಕಾರ್ಯನಿರ್ವಹಿಸುತ್ತಿಲ್ಲ. ಆರೋಗ್ಯ ಸೇವೆಯಲ್ಲಿಯೂ ನಮ್ಮ ಗ್ರಾಮಸ್ಥರು ಎರಡು ಸರ್ಕಾರಿ ಆಸ್ಪತ್ರೆಗಳ ನಡುವೆ ಅಲೆದಾಡುವ ಸ್ಥಿತಿ ಇದೆ. ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಸ್ಪಂದನೆ ದೊರೆಯುತ್ತಿಲ್ಲ” ಎಂದು ಹೇಳಿದರು.
ಗ್ರಾಮದ ನರೇಶ್ ಮಾತನಾಡಿ, “ಕೊಳವೆ ಬಾವಿ ಮೋಟರ್ ಕೆಟ್ಟು ಹಲವು ದಿನಗಳಾಗಿವೆ. ವಾಟರ್‌ಮನ್‌ಗೆ ಪ್ರಶ್ನಿಸಿದರೆ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ” ಎಂದು ದೂರಿದರು.
ಅಂಗನವಾಡಿ ಕಾರ್ಯಕರ್ತೆ ಕಂಚಮ್ಮ ಮಾತನಾಡಿ, “ಕೇಂದ್ರದಲ್ಲಿ ಎಂಟು ಮಕ್ಕಳು ಇದ್ದಾರೆ. ಕಾಂಪೌಂಡ್ ಇಲ್ಲ, ಶೌಚಾಲಯ ಸಮರ್ಪಕ ಸ್ಥಿತಿಯಲ್ಲಿಲ್ಲ. ಅಡುಗೆ ಮಾಡಲು ಅಗತ್ಯ ಸೌಲಭ್ಯಗಳಿಲ್ಲ. ಹಲವು ಬಾರಿ ಪಂಚಾಯಿತಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.
ಪಂಚಾಯಿತಿ ಸ್ಪಷ್ಟನೆ ಏನು?
ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಪಿಡಿಓ ಶ್ರೀನಿವಾಸಪ್ಪ ಪ್ರತಿಕ್ರಿಯಿಸಿ, “ಕೊಳವೆ ಬಾವಿ ಮೋಟರ್ ದುರಸ್ತಿಪಡಿಸಲಾಗಿದೆ. ಇನ್ನು ಗ್ರಾಮಕ್ಕೆ ನೀರಿನ ಪೂರೈಕೆ ಆರಂಭವಾಗಲಿದೆ. ಇದರಿಂದ ಶುದ್ಧ ಕುಡಿಯುವ ನೀರಿನ ಘಟಕವೂ ಕಾರ್ಯನಿರ್ವಹಿಸಲಿದೆ. ಗ್ರಾಮದ ಚರಂಡಿಗಳನ್ನು ಕೂಡ ತಕ್ಷಣ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
In English: Villagers in Kariyappanahalli, under Talakayalabetta Gram Panchayat in Sidlaghatta taluk, locked the GP office and staged a protest on Friday demanding an immediate fix to erratic drinking water supply, a non-functional purified water unit, garbage-choked drains breeding mosquitoes, and a poorly-equipped anganwadi centre lacking a compound wall and proper toilet. The Gram Panchayat PDO said the borewell motor has since been repaired, water supply will resume, and drain cleaning will follow.
FAQ
Why did Kariyappanahalli villagers protest?
Villagers locked the Talakayalabetta Gram Panchayat office and protested over erratic drinking water supply, a non-functional purified water unit, filthy garbage-choked drains, and an under-equipped anganwadi centre.
What did the Gram Panchayat say in response?
The Talakayalabetta GP PDO said the faulty borewell motor has been repaired, water supply to the village will resume, and steps will be taken to clean the village drains immediately.
What problems did villagers report at the anganwadi centre?
The anganwadi, which serves eight children, has no compound wall, no properly functioning toilet, and no kitchen — staff must cook on a stove placed on the ground.












