Sidlaghatta : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ) ವತಿಯಿಂದ ಸೆಪ್ಟೆಂಬರ್ 26ರಿಂದ 28ರವರೆಗೆ ಬಾಗೇಪಲ್ಲಿಯಲ್ಲಿ ನಡೆಯಲಿರುವ 13ನೇ ರಾಜ್ಯ ಯುವಜನ ಸಮ್ಮೇಳನದ ಅಂಗವಾಗಿ ಕಲಾಜಾಥಾ ಕಾರ್ಯಕ್ರಮವನ್ನು ಶುಕ್ರವಾರ ಸಂಜೆ ನಗರದ ಕೋಟೆ ವೃತ್ತದ ಬಳಿ ಆಯೋಜಿಸಲಾಗಿತ್ತು.
ಕಲಾಜಾಥಾದ ಮೂಲಕ ಜಿಲ್ಲೆಯಾದ್ಯಂತ ಸಂಚರಿಸಿ ಯುವಜನರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದ ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಸ್ಥಳದಿಂದ ಆರಂಭಗೊಂಡ ಕಲಾಜಾಥಾ, ಜಿಲ್ಲೆಯ ವಿವಿಧೆಡೆ ಸಂಚರಿಸಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಶಿಡ್ಲಘಟ್ಟಕ್ಕೆ ಆಗಮಿಸಿತು.
ಬಾಗೇಪಲ್ಲಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಬಯಲುಸೀಮೆಯ ಜನರು ಎದುರಿಸುತ್ತಿರುವ ಕೃಷಿ ವಿನಾಶ, ನಿರುದ್ಯೋಗ, ನೀರಿನ ಸಮಸ್ಯೆ, ಆರೋಗ್ಯ ಮತ್ತು ಶಿಕ್ಷಣದ ಸಮಸ್ಯೆ, ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 450 ಯುವಜನ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಯುವಜನರು ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಸರ್ಕಾರದ ಗಮನ ಸೆಳೆಯುವ ಹಾಗೂ ಪರಿಹಾರಕ್ಕಾಗಿ ಹೋರಾಟ ರೂಪಿಸುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಸಂಘಟಕರು ಹೇಳಿದರು.
ವಿದ್ಯಾರ್ಥಿ–ಯುವಜನರು ಮಾದಕ ವ್ಯಸನಗಳಿಂದ ವಿಮುಕ್ತರಾಗಬೇಕು, ಉದ್ಯೋಗ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಆರಂಭಿಸಬೇಕು, ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸಬೇಕು ಹಾಗೂ ಜಿಲ್ಲೆಗೆ ಕೃಷ್ಣಾ ನದಿ ನೀರಾವರಿ ಯೋಜನೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ಕಲಾಜಾಥಾದಲ್ಲಿ ಮುಂದಿಡಲಾಯಿತು. ಜಾತಿವಾದ ಮತ್ತು ಕೋಮುವಾದವನ್ನು ವಿರೋಧಿಸಿ ಯುವಜನರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಲಾಯಿತು.
ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಗಳನ್ನು ರೂಪಿಸುವ ನಿಟ್ಟಿನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಸಾರ್ವಜನಿಕರು ಹಾಗೂ ಯುವಜನರು ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದರು.
ಕಲಾಜಾಥಾದ ನಿರ್ದೇಶಕರಾದ ಎ.ವಿ. ವೆಂಕಟರಾಮ್, ಸೋಮಶೇಖರ್, ಚಲಪತಿ, ಶಿವಣ್ಣ, ಮಧುಲತಾ, ದೇವಪ್ಪ ಹಾಗೂ ನಾರಾಯಣಸ್ವಾಮಿ ಸೇರಿದಂತೆ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಜನಜಾಗೃತಿ ಮೂಡಿಸಿದರು.
In English: A DYFI (Democratic Youth Federation of India) Kalajatha (cultural awareness march) travelling across the district reached Sidlaghatta on Friday evening, ahead of the organisation’s 13th State Youth Conference to be held in Bagepalli from September 26-28. Around 450 youth delegates from across Karnataka are expected to attend the conference, which organisers say will discuss agrarian distress, unemployment, water scarcity, healthcare and education gaps, farmer suicides, and crimes against women, along with demands for job-generating industries and a Krishna river irrigation project for the district.








