Sidlaghatta : ನಿಧಿ ಫೌಂಡೇಷನ್ ಫಾರ್ ಅರ್ಲಿ ಇಂಟರ್ವೆನ್ಷನ್ಸ್ ವತಿಯಿಂದ ಬೆಳವಣಿಗೆಯಲ್ಲಿ ವಿಳಂಬ ಹಾಗೂ ತೊಂದರೆಗಳನ್ನು ಹೊಂದಿರುವ ಮಕ್ಕಳಿಗಾಗಿ ಶನಿವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ ನಡೆಯಿತು.
ನಿಧಿ ಫೌಂಡೇಷನ್ ಆಹ್ವಾನದ ಮೇರೆಗೆ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಯೂನಿಟ್ ಆಫ್ ಹೋಪ್ನಿಂದ ಐವರು ಅನುಭವಿ ವೈದ್ಯರು ಹಾಗೂ ಅರ್ಲಿ ಇಂಟರ್ವೆನ್ಷನ್ ತಜ್ಞರ ತಂಡ ಶಿಬಿರದಲ್ಲಿ ಭಾಗವಹಿಸಿತು. ಶಿಶುವೈದ್ಯರು, ಮಕ್ಕಳ ಮನೋವೈದ್ಯರು, ಮಕ್ಕಳ ಮನಶ್ಶಾಸ್ತ್ರಜ್ಞರು, ಫಿಜಿಯೋಥೆರಪಿಸ್ಟ್ಗಳು ಹಾಗೂ ವಾಕ್ ಮತ್ತು ಭಾಷಾ ತಜ್ಞರು ಮಕ್ಕಳನ್ನು ತಪಾಸಣೆ ನಡೆಸಿದರು.
ಶಿಬಿರದಲ್ಲಿ 25 ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆಯನ್ನು ಪರಿಶೀಲಿಸಿ, ಅವರ ದೈಹಿಕ, ಮಾನಸಿಕ ಹಾಗೂ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪೋಷಕರಿಗೆ ಅಗತ್ಯ ಸಲಹೆಗಳನ್ನು ನೀಡಲಾಯಿತು. ಬೆಳವಣಿಗೆಯ ಮೈಲಿಗಲ್ಲುಗಳಲ್ಲಿ ವಿಳಂಬ, ಮಾತು ಹಾಗೂ ಭಾಷಾ ಬೆಳವಣಿಗೆಯ ತೊಂದರೆ, ಕಲಿಕೆಗೆ ಸಂಬಂಧಿಸಿದ ಸಮಸ್ಯೆಗಳು, ನಡವಳಿಕೆ ಹಾಗೂ ಇತರ ಬೆಳವಣಿಗೆ ಸಂಬಂಧಿತ ಸಮಸ್ಯೆಗಳ ಕುರಿತು ತಜ್ಞರು ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು.
ಮಕ್ಕಳ ಬೆಳವಣಿಗೆಯಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ತೊಂದರೆ ಕಂಡುಬಂದಲ್ಲಿ ಆರಂಭಿಕ ಹಂತದಲ್ಲಿಯೇ ತಜ್ಞರಿಂದ ತಪಾಸಣೆ ಹಾಗೂ ಸೂಕ್ತ ಮಾರ್ಗದರ್ಶನ ಪಡೆಯುವುದು ಅಗತ್ಯ ಎಂದು ವೈದ್ಯರು ಪೋಷಕರಿಗೆ ತಿಳಿಸಿದರು. ಹೆಚ್ಚಿನ ಪರೀಕ್ಷೆ ಅಥವಾ ಚಿಕಿತ್ಸೆಯ ಅಗತ್ಯವಿರುವ ಮಕ್ಕಳಿಗೆ ಮುಂದಿನ ಹಂತದಲ್ಲಿ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಭ್ಯವಿರುವ ತಜ್ಞ ವೈದ್ಯಕೀಯ ಸೇವೆಗಳು ಹಾಗೂ ಪರೀಕ್ಷೆಗಳ ಕುರಿತು ಮಾಹಿತಿ ನೀಡಲಾಯಿತು.
ನಿಧಿ ಫೌಂಡೇಷನ್ನ ಗಾಯತ್ರಿ ಕಿರಣ್, ಗೀತಾ ಸವಿತಾ ಹಾಗೂ ತಂಡ, ಗ್ರಾಮಾಂತರ ಟ್ರಸ್ಟ್ನ ಉಷಾ ಎಸ್. ಶೆಟ್ಟಿ ಸೇರಿದಂತೆ ಹಲವರು ಶಿಬಿರದಲ್ಲಿ ಉಪಸ್ಥಿತರಿದ್ದರು.
ಪೋಷಕರಿಗೆ ಸಲಹೆ
ಮಕ್ಕಳ ಬೆಳವಣಿಗೆ, ಮಾತು, ಚಲನವಲನ, ಕಲಿಕೆ ಅಥವಾ ನಡವಳಿಕೆಯಲ್ಲಿ ವಯೋಮಾನಕ್ಕೆ ಅನುಗುಣವಾದ ಬೆಳವಣಿಗೆ ಕಂಡುಬರದಿದ್ದರೆ ನಿರ್ಲಕ್ಷಿಸದೆ ತಜ್ಞರ ಸಲಹೆ ಪಡೆಯಬೇಕು. ಆರಂಭಿಕ ಹಂತದಲ್ಲೇ ಗುರುತಿಸಿ ಅಗತ್ಯ ತರಬೇತಿ ಮತ್ತು ಚಿಕಿತ್ಸೆಯನ್ನು ಆರಂಭಿಸುವುದರಿಂದ ಮಕ್ಕಳ ಬೆಳವಣಿಗೆಗೆ ನೆರವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
In English: Nidhi Foundation for Early Interventions organised a free screening camp for children with developmental delays at the government hospital in Sidlaghatta on Saturday, in association with a five-member team of paediatricians, child psychiatrists, psychologists, physiotherapists, and speech-language experts from St. John’s Medical College and Hospital’s Unit of Hope, Bengaluru. The camp screened 25 children for physical, mental, and developmental issues, including delayed milestones, speech and language difficulties, and learning and behavioural concerns, and counselled parents accordingly. Doctors advised parents not to ignore any delay in a child’s growth, speech, movement, learning, or behaviour, and to seek expert evaluation early, as timely intervention can significantly help a child’s development.
ನಗರದಲ್ಲಿ ಈ ಹಿಂದೆ ನಡೆದಿದ್ದ ಇಂತಹುದೇ ಆರೋಗ್ಯ ಶಿಬಿರದ ಬಗ್ಗೆ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ ಎಂಬ ವರದಿಯನ್ನೂ ಓದಿ.








