Home News ರೇಷ್ಮೆ ಗೂಡಿನಿಂದ ಕರಕುಶಲ ವಸ್ತುಗಳ ತಯಾರಿಕಾ ತರಬೇತಿ

ರೇಷ್ಮೆ ಗೂಡಿನಿಂದ ಕರಕುಶಲ ವಸ್ತುಗಳ ತಯಾರಿಕಾ ತರಬೇತಿ

0
Sidlaghatta Silk Cocoon Handcraft Training

ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಗ್ರಾಮದಲ್ಲಿ ಬೀಡುಬಿಟ್ಟಿರುವ ರೇಷ್ಮೆ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ಗ್ರಾಮದ ಮಹಿಳೆಯರಿಗೆ ರೇಷ್ಮೆ ಗೂಡುಗಳಿಂದ ಅಲಂಕಾರಿಕ ಕರಕುಶಲ ವಸ್ತುಗಳ ತಯಾರಿಕಾ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನಡೆಸಿ ಚಿಂತಾಮಣಿಯ ರೇಷ್ಮೆ ವಿಭಾಗದ ಪ್ರಾಧ್ಯಾಪಕಿ ಡಾ.ಪಲ್ಲವಿ ಮಾತನಾಡಿದರು.

ರೇಷ್ಮೆ ಗೂಡಿನಿಂದ ಹೀಗೆ ಅಲಂಕಾರಿಕಾ ವಸ್ತುಗಳನ್ನು ತಯಾರಿಸಲು ಯಾವುದೇ ಯಂತ್ರ ಬೇಕಿಲ್ಲ. ಬದಲಿಗೆ ಕೈನಲ್ಲೇ ಸುಂದರ ಚಿತ್ತಾಕರ್ಷಕ ಕಲಾತ್ಮಕ ಹೂಗಳು, ಗೊಂಬೆಗಳನ್ನು ಮಾಡಬಹುದು. ಇದಕ್ಕೆ ಹೆಚ್ಚು ಸಮಯ ಕೂಡ ತಗುಲುವುದಿಲ್ಲ. ಬಿಡುವಿನ ವೇಳೆಯಲ್ಲಿ ಮನೆಯಲ್ಲೇ ಮಹಿಳೆಯರು ಇದನ್ನ ಹವ್ಯಾಸದ ಜೊತೆಗೆ ಸಣ್ಣ ಉದ್ದಿಮೆಯಾಗಿ ರೂಢಿ ಮಾಡಿಕೊಳ್ಳಬಹುದು. ಕ್ಷಣಾರ್ಧದಲ್ಲೇ ಚಿತ್ತಾಕರ್ಷಕ ಗೊಂಬೆ, ಹೂ, ಹಾರಗಳನ್ನು ಮಾಡುವುದರ ಜೊತೆಗೆ ಕೂತ ಜಾಗದಲ್ಲೇ ಲಾಭವನ್ನು ಗಳಿಸಬಹುದು ಎಂದು ಅವರು ತಿಳಿಸಿದರು.

 ಚಿಟ್ಟೆ ಕೊರೆದ ಅಥವಾ ಕತ್ತರಿಸಿದ ರೇಷ್ಮೆ ಗೂಡುಗಳಿಂದ ರೇಷ್ಮೆ ತಯಾರಿಸಲಾಗದು. ಅವುಗಳನ್ನು ಹೂವುಗಳು, ಗೊಂಬೆಗಳು ಮನೆಯ ಅಲಂಕಾರಕ್ಕೆ ಉಪಯೋಗಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಮದುವೆ ಶುಭ ಸಮಾರಂಭಗಳಿಗೆ ಇವನ್ನು ಉಡುಗೊರೆಯಾಗಿಯೂ ಕೊಡಬಹುದು. ನಾಲ್ಕು ಹೂಗಳು ಸೇರಿ ಒಂದು ಗುಚ್ಚ. ಹಲವು ಗುಚ್ಚಗಳ ಪೋಣಿಕೆ ಹಾರ. ಹಾರದ ಮಧ್ಯಕ್ಕೆ ದೊಡ್ಡ ಗುಚ್ಚವೊಂದನ್ನು ತೂಗಿಸಿದರೆ, ಅಸಲಿ ಹೂ ನಾಚುತ್ತದೆ. ಬಿದಿರಿನ ಬೆತ್ತದ ಚಿಕ್ಕ ಬುಟ್ಟಿಯೊಳಗೆ ಎರಡ್ಮೂರು ಗುಚ್ಚ ಇಟ್ಟು, ಮಧ್ಯೆಮಧ್ಯೆ ಮುತ್ತನ್ನು ಪೋಣಿಸಿ ಹಾರ ಮಾಡಿ ಸಮಾರಂಭದಲ್ಲಿ ಬಳಸಬಹುದು.

 ಇನ್ನು ಇದರ ಬೆಲೆ ಕೂಡ ಎಲ್ಲರ ಕೈಗೆಟುಕುವಂತಿರುವುದರಿಂದ ಎಲ್ಲರೂ ಇದನ್ನು ಕೊಳ್ಳಲು ಮುಂದಾಗುತ್ತಾರೆ. ಇದರಿಂದಾಗಿ ಸಣ್ಣ ಉದ್ಯಮಕ್ಕೂ ದಾರಿಯಾಗಿದೆ. ಯಂತ್ರಗಳ ಸಹಾಯ ಬೇಕಿಲ್ಲವಾದ್ದರಿಂದ ಕೈಗಳೇ ಯಂತ್ರಗಳು. ಕಡಿಮೆ ಖರ್ಚಿನಲ್ಲಿ ಹೊಸ ದುಡಿಮೆಯನ್ನು ಕಂಡುಕೊಳ್ಳಬಹುದು. ಕಲಾತ್ಮಕವಾಗಿ ತಯಾರಿಸಲು ಸ್ವಲ್ಪ ಶ್ರದ್ಧೆಯನ್ನು ವಹಿಸಿದರೆ ಮಾರುಕಟ್ಟೆಯಲ್ಲಿ ಇದಕ್ಕೆ ಒಳ್ಳೆ ಬೇಡಿಕೆ ಸಿಗಲಿದೆ ಎಂದು ಹೇಳಿದರು.

ದೊಡ್ಡದಾಸೇನಹಳ್ಳಿಯ ಸ್ವಸಹಾಯ ಮಹಿಳಾ ಗುಂಪುಗಳು, ಸ್ತ್ರೀ ಶಕ್ತಿ ಗುಂಪುಗಳು, ವಿಶೇಷ ಚೇತನರು ಹಾಗೂ ಗ್ರಾಮದ ಎಲ್ಲಾ ರೈತರು ಪಾಲ್ಗೊಂಡು ತರಬೇತಿಯನ್ನು ಪಡೆದುಕೊಂಡರು.

 ರೇಷ್ಮೆ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಬಸವರಾಜ್, ಆದರ್ಶ್, ಚಂದನ್, ಅಮೋಘ್, ಹರ್ಷದ್, ದಿವಾಕರ, ಐಶ್ವರ್ಯ, ಅಶ್ವಿನಿ, ಭಾರತಿ, ಚೈತ್ರ, ಚಂದನ, ಜಯಲಕ್ಷ್ಮಿ, ಜಯಶ್ರೀ, ಲಾವಣ್ಯ ಹಾಗೂ ಮಮತಾ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version