Home News ರೇಷ್ಮೆ ಸಚಿವರನ್ನು ಭೇಟಿ ಮಾಡಿದ ರೀಲರುಗಳ ನಿಯೋಗ

ರೇಷ್ಮೆ ಸಚಿವರನ್ನು ಭೇಟಿ ಮಾಡಿದ ರೀಲರುಗಳ ನಿಯೋಗ

0
Silk Reelers Sidlaghatta Minister Meet

ಎರಡು ಮೂರು ವಾರದೊಳಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆಗೂಡು ಮಾರುಕಟ್ಟೆಗಳಿಗೆ ಭೇಟಿ ನೀಡಿ ರೀಲರುಗಳು, ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ನಿವಾರಿಸುವ ಕೆಲಸ ಮಾಡಲಿದ್ದೇನೆ ಎಂದು ರೇಷ್ಮೆ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.

ಶಿಡ್ಲಘಟ್ಟದ ಮಾಜಿ ಶಾಸಕ ಎಂ.ರಾಜಣ್ಣ ನೇತೃತ್ವದಲ್ಲಿ ಶಿಡ್ಲಘಟ್ಟ ರೀಲರ್ಸ್ ವೆಲ್‌ಫೇರ್ ಅಸೊಸಿಯೇಷನ್‌ನ ಪದಾಧಿಕಾರಿಗಳ ನಿಯೋಗದೊಂದಿಗೆ ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೇಷ್ಮೆ ಬೆಳೆಗಾರರು, ರೀಲರುಗಳ ಎದುರಿಸುತ್ತಿರುವ ಅನೇಕ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದೆ. 15 ದಿನಗಳೊಳಿಗೆ ಶಿಡ್ಲಘಟ್ಟ, ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆ, ಕುರುಬೂರು ರೇಷ್ಮೆ ಕೃಷಿ ಕಾಲೇಜಿಗೆ ಭೇಟಿ ನೀಡಲಿದ್ದೇನೆ.

ಅದೇ ಸಮಯದಲ್ಲಿ ರೇಷ್ಮೆ ಬೆಳೆಗಾರರ, ರೀಲರುಗಳ ಹಾಗೂ ಅಧಿಕಾರಿಗಳ ಸಭೆ ನಡೆಸಿ ವಿಸ್ತೃತವಾಗಿ ಚರ್ಚೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಈ ವೇಳೆ ರೀಲರುಗಳು ಅನೇಕ ಪ್ರಮುಖ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು, ಪ್ರಮುಖವಾಗಿ ಇತ್ತೀಚೆಗೆ ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾಗುತ್ತಿರುವ ರೇಷ್ಮೆಗೂಡಿನ ಪ್ರಮಾಣ ಕುಸಿಯುತ್ತಿರುವ ಬಗ್ಗೆ ಗಮನ ಸೆಳೆದರು.

ಮಾರುಕಟ್ಟೆಗೆ ಬರುವ ಮಾರ್ಗದಲ್ಲೆ ರೇಷ್ಮೆಬೆಳೆಗಾರರನ್ನು ಅಡ್ಡಗಟ್ಟಿ ಬಲವಂತವಾಗಿ ಕೆಲ ರೀಲರುಗಳು ರೈತರನ್ನು ತಮ್ಮ ಮನೆಗೆ ಕರೆದೊಯ್ದು ಗೂಡನ್ನು ಖರೀದಿಸುವುದು, ಗೂಡು ಮಾರುಕಟ್ಟೆ ಅವರಣದಲ್ಲೆ ಕೆಲ ರೀಲರುಗಳು ತೂಕದ ಯಂತ್ರಗಳನ್ನು ಇಟ್ಟುಕೊಂಡು ಅಲ್ಲೇ ಗೂಡನ್ನು ಖರೀದಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಹಾಗೂ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ಜಾತವಾರ ಬಳಿ ಖಾಸಗಿ ರೇಷ್ಮೆ ಮಂಡಿ ಆರಂಭವಾಗಿದ್ದು ಶೀಘ್ರದಲ್ಲೆ ಶಿಡ್ಲಘಟ್ಟದಲ್ಲೂ ಇಂತದ್ದೆ ಇನ್ನೊಂದು ಮಂಡಿ ಆರಂಭಿಸಲು ಸಿದ್ದತೆಗಳು ನಡೆಯುತ್ತಿದ್ದು ಅದಕ್ಕೆ ಕಾನೂನು ಬದ್ದವಾಗಿ ಕಡಿವಾಣ ಹಾಕಬೇಕಿದೆ ಎಂದರು.

ಶಿಡ್ಲಘಟ್ಟದಲ್ಲಿ ತಯಾರಾಗುವ ರೇಷ್ಮೆನೂಲು ದೇಶದ ಪ್ರಮುಖ ನಗರಗಳಾದ ಕಂಚಿ, ಬನಾರಸ್, ವಾರಣಾಸಿ, ಸೂರತ್ ಇನ್ನಿತರೆ ನಗರಗಳಿಗೆ ರಪ್ತು ಆಗುತ್ತದೆ. ಆದರೆ ಅಲ್ಲಿ ದೊಡ್ಡ ದೊಡ್ಡ ರೀಲರುಗಳಿಗೆ ಮಾತ್ರವೇ ವಹಿವಾಟಿಗೆ ಅವಕಾಶವಿದೆ.

ಪ್ರಮುಖ ನಗರಗಳಲ್ಲಿನ ಉದ್ದಿಮೆದಾರರು ಕೇಳುವ ಗುಣಮಟ್ಟದ ನೂಲನ್ನೆ ನಾವು ಕೊಡುತ್ತೇವೆ. ಹಾಗಾಗಿ ಸರ್ಕಾರದ ಮಟ್ಟದಲ್ಲೆ ಒಮ್ಮೆ ಪ್ರಮುಖ ರೀಲರುಗಳನ್ನು ಈ ಪ್ರಮುಖ ನಗರಗಳ ಉದ್ದಿಮೆದಾರರ ಬಳಿ ಕರೆದೊಯ್ದು ಪರಸ್ಪರ ಚರ್ಚೆಗೆ ಅವಕಾಶ ಕಲ್ಪಿಸಬೇಕು.

ಒಮ್ಮೊಮ್ಮೆ ದಿಢೀರ್ ಎಂದು ರೇಷ್ಮೆ ನೂಲು ಬೆಲೆ ಕುಸಿದಾಗ ರೀಲರುಗಳಿಗೆ ನಷ್ಟವಾಗುತ್ತದೆ. ಹೀಗೆ ಮಾರುಕಟ್ಟೆಯಲ್ಲಿ ಬೆಲೆ ದಿಢೀರ್ ಕುಸಿದಾಗ ಕೆಎಸ್‌ಎಂಬಿ ಮೂಲಕ ಅಡ ಇಟ್ಟು ಸಾಲ ಪಡೆದುಕೊಳ್ಳುವ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವಂತೆ ಬಡ್ಡಿರಹಿತ ಸಾಲ ನೀಡಲು ಸರಕಾರ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ರೀಲರುಗಳ ಈ ಮನವಿಯನ್ನು ಆಲಿಸಿದ ಸಚಿವರು, ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿ, ಎಸ್ಪಿ ಅವರಿಗೆ ಕರೆ ಮಾಡಿ ರೇಷ್ಮೆಗೂಡನ್ನು ಮಾರುಕಟ್ಟೆಗೆ ತರುವ ರೈತರನ್ನು ದಾರಿ ಮದ್ಯೆ ತಡೆದು ಮನೆಗೆ ಬಲವಂತವಾಗಿ ಕರೆದೊಯ್ದು ಗೂಡನ್ನು ಖರೀದಿಸುವಂತ ಪ್ರಕರಣಗಳಿಗೆ ಕಡಿವಾಣ ಹಾಕಿ ಎಂದು ಸೂಚಿಸಿದರು. ಮಿಕ್ಕ ಎಲ್ಲ ಸಮಸ್ಯೆಗಳನ್ನು ಜಿಲ್ಲೆಗೆ ಭೇಟಿ ನೀಡಿದಾಗ ಚರ್ಚಿಸಿ ಬಗೆಹರಿಸುವ ಭರವಸೆ ನೀಡಿದರು.

ಮಾಜಿ ಶಾಸಕ ಎಂ.ರಾಜಣ್ಣ, ರೀಲರ್ಸ್ ಅಸೊಸಿಯೇಷನ್‌ನ ಅಧ್ಯಕ್ಷ ಅನ್ಸರ್ ಖಾನ್, ರಾಮಕೃಷ್ಣಪ್ಪ, ಎಂ.ಡಿ.ಅನ್ವರ್, ಮಂಜುನಾಥ್, ಆನಂದ್ ಮುಂತಾದ ರೀಲರುಗಳು ಭಾಗವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version