
Sidlaghatta : ವಿದ್ಯಾರ್ಥಿಗಳು ವಿವಿಧ ಆಕರ್ಷಣೆಗಳಿಗೆ ಬಲಿಯಾಗದೆ, ಸಕಾರತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಒಂದು ಉತ್ತಮ ಗುರಿ ಇಟ್ಟುಕೊಳ್ಳಬೇಕು. ಆ ಗುರಿ ತಲುಪಲು ಶ್ರದ್ದೆ ಸತತ ಪರಿಶ್ರಮ ಹಾಗೂ ಆತ್ಮಸ್ಥೆರ್ಯದಿಂದ ಪ್ರಯತ್ನಿಸಬೇಕು. ಆಗ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ತಿಳಿಸಿದರು.
ನಗರದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀ ಶಾರದಾ ವಿದ್ಯಾ ಸಂಸ್ಥೆಯ ಎ. ಆರ್. ಎಂ ಪಿಯು ಕಾಲೇಜಿನ 2025 ನೇ ಸಾಲಿನ ಶ್ರೇಯೋಸ್ತು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಅಭ್ಯಾಸದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೂ ಒತ್ತು ನೀಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಮತ್ತು ಮನೋತಜ್ಞ ಯೋಗೀಶ್ ಮಾಸ್ಟರ್ ಮಾತನಾಡಿ, ದೊಡ್ಡ ಸಾಧನೆ ಮಾಡಬೇಕು ಎನ್ನುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವೇ ಪ್ರಮುಖ ಅಸ್ತ್ರ. ಯಾವುದೇ ಸಮಯದಲ್ಲಿ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ಸದಾ ನಿಮ್ಮ ಮನಸ್ಸನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು ಎಂದರು
ಇನ್ಸ್ ಪೆಕ್ಟರ್ ಶ್ರೀನಿವಾಸ್ ಮಾತನಾಡಿ, ದೇಶದ ನಾಳಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಮುಖ್ಯ. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಸಂಚಾರ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯರು, ಬಾಲಕಿಯ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಫೋಕ್ಸೊ ಕಾಯ್ದೆ ಸಹಕಾರಿಯಾಗಿದೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇತರ ಅನವಶ್ಯಕ ಕೆಲಸಗಳತ್ತ ಆಕರ್ಷಿತರಾಗದೇ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶಾರದಾ ಸಂಸ್ಥೆಯ ಅಧ್ಯಕ್ಷ ಮುನಿರತ್ನಂ, ಕಾರ್ಯದರ್ಶಿ ಶ್ರೀಕಾಂತ್, ಎ.ಆರ್.ಎಂ.ಪಿಯು ಕಾಲೇಜು ಪ್ರಾಂಶುಪಾಲ ಡಾ.ಕೆ.ಮೂರ್ತಿ ಸಾಮ್ರಾಟ್, ಟೆಸ್ಟ್ ಬಿ ಸ್ಥಾಪಕ ಶಂಕರ್, ಸಾಹಿತಿ ಜನ ನಾಗಪ್ಪ, ಲಕ್ಷ್ಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ದೇವರಾಜ್ ಸೇರಿದಂತೆ ಮುಂತಾದವರು ಹಾಜರಿದ್ದರು